ರಾಜ್ಯದಲ್ಲಿ ಇಂದಿನಿಂದ ಅನ್ ಲಾಕ್ 3.0 ಜಾರಿಯಾಗಿದ್ದು, ಬಿಎಂಟಿಸಿ ಬಸ್ಸುಗಳು ಸಂಪೂರ್ಣ ಪ್ರಮಾಣದಲ್ಲಿ ರಸ್ತೆಗಿಳಿದಿವೆ. ಇಂದಿನಿಂದ ಸರ್ಕಾರಿ ಕಚೇರಿ ಸೇರಿದಂತೆ ಎಲ್ಲೆಡೆ ಶೇ. 100 ರಷ್ಟು ಅವಕಾಶ ಕೊಟ್ಟಿರುವುದರಿಂದ ಬಸ್, ಮೆಟ್ರೋ ಸಂಚಾರಕ್ಕೂ ಅನುಮತಿ ಸಿಕ್ಕಿದೆ. ಆದ್ರೆ ಬೆಂಗಳೂರಿನಲ್ಲಿ ರಾತ್ರಿ 9 ರಿಂದ ಬೆಳಗ್ಗೆ 5 ರವರೆಗೆ ಬಿಎಂಟಿಸಿ ಬಸ್ ಸಂಚಾರವಿರುವುದಿಲ್ಲ.
ಪ್ರಯಾಣಿಕರು ಮತ್ತು ಚಾಲಕರು, ನಿರ್ವಾಹಕರಿಗೆ ಮಾಸ್ಕ್ ಕಡ್ಡಾಯ ಎಂದು ಜನಜಾಗೃತಿಯನ್ನೂ ಮೂಡಿಸಲಾಗುತ್ತಿದೆ. ಆದರೂ ಜನ ಸಂಚಾರ ಎಂದಿನಂತೆ ಇಲ್ಲ. ಪ್ರಯಾಣಿಕರು ಕಡಿಮೆ ಪ್ರಮಾಣದಲ್ಲಿ ಓಡಾಟ ನಡೆಸುತ್ತಿದ್ದಾರೆ. ನೈಟ್ ಕರ್ಫ್ಯೂ ಹಿನ್ನಲೆ ರಾತ್ರಿ ಪಾಳಿಯ ಬಸ್ ಓಡಾಟವಿಲ್ಲ.
ಅನ್ಲಾಕ್ 2.0 ನಲ್ಲಿ 2000 ರಿಂದ 2500 ಸಾವಿರ ಕೆಎಸ್ ಆರ್ಟಿಸಿ ಬಸ್ಸುಗಳ ಕಾರ್ಯಾಚರಣೆ ಮಾಡಲಾಗಿತ್ತು. ಇಂದಿನಿಂದ 3500 ರಿಂದ 4000 ಬಸ್ ಗಳು ಕಾರ್ಯಾಚರಣೆ ಮಾಡಲಿವೆ. ರಾಜ್ಯದ ಎಲ್ಲಾ ಪ್ರಮುಖ ದೇವಾಲಯಗಳಲ್ಲಿ ಭಕ್ತರಿಗೆ ಅವಕಾಶ ನೀಡಿರುವ ಹಿನ್ನಲೆ, ಪ್ರಯಾಣಿಕರ ಸಂಖ್ಯೆ ಕ್ರಮೇಣ ಹೆಚ್ಚಾಗಲಿದೆ ಎಂಬ ನಿರೀಕ್ಷೆ ಮೇಲೆ ಹೆಚ್ಚುವರಿ ಬಸ್ ವ್ಯವಸ್ಥೆ ಮಾಡಲಾಗಿದೆ. ಕೆಎಸ್ಆರ್ಟಿಸಿ ಗೆ ಯಾವುದೇ ಸಮಯದ ನಿರ್ಬಂಧವಿಲ್ಲ. ರಾತ್ರಿ ವೇಳೆಯಲ್ಲೂ ಕೆಎಸ್ಆರ್ಟಿಸಿ ಬಸ್ಸುಗಳ ಕಾರ್ಯಾಚರಣೆ ಮಾಡಲಿದೆ.