ಬೆಂಗಳೂರು: ಎಚ್ ಎಂಪಿವಿ ವೈರಸ್ ಬಗ್ಗೆ ಇಂದು ಪತ್ರಿಕಾಗೋಷ್ಠಿಯಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮಹತ್ವದ ಮಾಹಿತಿ ನೀಡಿದ್ದಾರೆ.
ಬೆಂಗಳೂರಿನಲ್ಲಿ ಇಬ್ಬರು ಮಕ್ಕಳಲ್ಲಿ ಎಚ್ ಎಂಪಿವಿ ವೈರಸ್ ಪತ್ತೆಯಾದ ಬೆನ್ನಲ್ಲೇ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಇಂದು ಸುದ್ದಿಗೋಷ್ಠಿಯಲ್ಲಿ ಪ್ರಕಟಣೆ ನೀಡಿದ್ದಾರೆ. ಈ ವೈರಸ್ ಬಗ್ಗೆ ಎಚ್ಚರಿಕೆ ಸಾಕು, ಆತಂಕ ಬೇಡ ಎಂದು ಸಚಿವರು ಅಭಯ ನೀಡಿದ್ದಾರೆ.
ಬೆಂಗಳೂರಿನಲ್ಲಿ 8 ತಿಂಗಳ ಮತ್ತು 3 ತಿಂಗಳ ಮಗುವಿಗೆ ಎಚ್ ಎಂಪಿವಿ ಸೋಂಕು ಖಚಿತವಾಗಿತ್ತು. ಇದು ದೇಶದಲ್ಲೇ ಮೊದಲ ಕೇಸ್ ಆಗಿತ್ತು. ಚೀನಾದಲ್ಲಿ ಅಬ್ಬರಿಸುತ್ತಿರುವ ಈ ಸೋಂಕು ರೋಗ ಭಾರತಕ್ಕೂ ಕಾಲಿಟ್ಟಿರುವುದು ಜನರಲ್ಲಿ ಆತಂಕ ಮೂಡಿಸಿದೆ.
ಇದರ ಬೆನ್ನಲ್ಲೇ ಮಾಹಿತಿ ನೀಡಿರುವ ದಿನೇಶ್ ಗುಂಡೂರಾವ್, ಈ ವೈರಸ್ ಹೊಸದೇನಲ್ಲ. ಬಹಳ ಕಾಲದಿಂದಲೂ ಇದೆ. ಈ ವೈರಸ್ ನಿಂದ ಜೀವಕ್ಕೆ ಯಾವುದೇ ಅಪಾಯವಿಲ್ಲ. ದೇಶದಲ್ಲಿ ನೂರಾರು ರೀತಿಯ ಎಚ್ ಎಂಪಿವಿ ವೈರಸ್ ಇದೆ. ಚೀನಾದಲ್ಲಿ ಮ್ಯೂಟೇಟ್ ಆಗಿದೆಯೋ ನನಗೆ ಗೊತ್ತಿಲ್ಲ. ಇದರ ಬಗ್ಗೆ ಕೇಂದ್ರ ವರದಿ ನೀಡಬೇಕು.
ಕರ್ನಾಟಕದಲ್ಲಿ 2 ಲಕ್ಷ 36 ಸಾವಿರ ಐಎಲ್ಐ ಕೇಸ್ ಗಳಿವೆ. ಗುಜರಾತ್, ಪುದುಚೇರಿಯಂತಹ ರಾಜ್ಯಗಳಲ್ಲೂ ಎಚ್ ಎಂಪಿವಿ ಕೇಸ್ ಗಳಿವೆ. ಚಳಿಗಾಲದಲ್ಲಿ ಸಹಜವಾಗಿಯೇ ಶೀತ, ಕೆಮ್ಮು ಇರುತ್ತದೆ. ಆದರೆ ಇಂತಹ ಆರೋಗ್ಯ ಲಕ್ಷಣವೆಲ್ಲವೂ ಎಚ್ ಎಂಪಿವಿ ಅಲ್ಲ. ಎಚ್ ಎಂಪಿವಿ ವೈರಸ್ ಗುಣಮುಖವಾದ ರೋಗವಲ್ಲ. ಈಗಾಗಲೇ ವೈರಸ್ ತಗುಲಿರುವ ಇಬ್ಬರು ಮಕ್ಕಳೂ ಗುಣಮುಖರಾಗಿದ್ದಾರೆ. ಹೀಗಾಗಿ ಮಾಸ್ಕ್ ಹಾಕುವುದು, ಲಾಕ್ ಡೌನ್ ಮಾಡುವ ಅಗತ್ಯವೇನೂ ಇಲ್ಲ. ಎಚ್ಚರಿಕೆಯಿಂದಿರಬೇಕು ಆದರೆ ಆತಂಕ ಪಡುವ ಅಗತ್ಯವಿಲ್ಲ ಎಂದಿದ್ದಾರೆ.
ಬೆಂಗಳೂರಿನಲ್ಲಿ 8 ತಿಂಗಳ ಮಗು ಹ್ಯೂಮನ್ ಮೆಟಾಪ್ನ್ಯೂಮೋ ವೈರಸ್ (ಎಚ್‌ಎಂಪಿವಿ) ಸೋಂಕಿಗೆ ಒಳಗಾಗಿರುವ ವರದಿಗಳಿವೆ. ಆದರೆ, ಇದು ಹೊಸ ವೈರಸ್ ಅಲ್ಲ. ಮಗು ಆರೋಗ್ಯ ಸ್ಥಿರವಾಗಿದ್ದು, ಆತಂಕ ಪಡುವ ಅಗತ್ಯವಿಲ್ಲ.
2001ರಿಂದ ಎಚ್‌ಎಂಪಿವಿ ವೈರಾಣು ಕಾಣಿಸಿಕೊಳ್ಳುತ್ತಿದೆ. ಈ ಕುರಿತು ಗಾಬರಿಯಾಗುವ ಅವಶ್ಯಕತೆಯಿಲ್ಲ. ಆದರೂ, ಮುನ್ನೆಚ್ಚರಿಕೆಯಾಗಿ… pic.twitter.com/8EH7KNObV6
— Dinesh Gundu Rao/ದಿನೇಶ್ ಗುಂಡೂರಾವ್ (@dineshgrao) January 6, 2025