ಗೌರಿ ಲಂಕೇಶ್ ಮನೆ ಸಮೀಪದಲ್ಲೇ ಸಿಕ್ತು ಸಿಮ್ ಇಲ್ಲದ ಮೊಬೈಲ್…?
ಬುಧವಾರ, 13 ಸೆಪ್ಟಂಬರ್ 2017 (16:25 IST)
ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ತನಿಖೆ ವೇಳೆಯಲ್ಲಿ ಗೌರಿ ಲಂಕೇಶ್ ಮನೆ ಸಮೀಪದಲ್ಲಿ ಮೊಬೈಲ್ ಸಿಕ್ಕಿದ್ದು, ತನಿಖೆ ಮಹತ್ವದ ಘಟ್ಟ ತಲುಪಿದೆ ಎನ್ನಲಾಗ್ತಿದೆ.
ಗೌರಿ ಲಂಕೇಶ್ ಮನೆಯ ಸಮೀಪದಲ್ಲಿ ಎಸ್ಐಟಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದ ವೇಳೆ ಅಧಿಕಾರಿಗಳಿಗೆ ಮೊಬೈಲ್ ಪತ್ತೆಯಾಗಿದೆ. 2 ದಿನಗಳ ಬಳಿಕ ಮಳೆಯಲ್ಲಿ ನೆನೆದಿರುವ ಮೊಬೈಲ್ ಪತ್ತೆಯಾಗಿದ್ದು, ಸಿಮ್ ಕಾರ್ಡ್ ಲಭ್ಯವಾಗಿಲ್ಲ. ಮಳೆಯಲ್ಲಿ ನೆನೆದಿರುವ ಪರಿಣಾಮ ಸಾಫ್ಟ್ ವೇರ್ ಹಾಳಾಗಿರುವ ಸಾಧ್ಯತೆ ಇದೆ ಎನ್ನಲಾಗಿದೆ.
ಹಂತಕರು ಕೃತ್ಯಕ್ಕೆ ಬಳಸಿದ್ದ ಮೊಬೈಲ್ ಇದಾಗಿರಬಹುದು ಎನ್ನಲಾಗಿದ್ದು, ಸೈಬರ್ ಸೆಲ್ ನಿಂದ ಈ ಸಂಬಂಧ ಎಸ್ಐಟಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಗೌರಿ ಲಂಕೇಶ್ ಹತ್ಯೆ ಬಳಿಕ ಅವರ ಮನೆ ಬಳಿಯಿದ್ದ ಸಿಸಿಟಿವಿ ದೃಶ್ಯದಲ್ಲಿ ಹಂತಕರು ಮೊಬೈಲ್ ಬಳಕೆ ಮಾಡಿರುವ ಸುಳಿವು ಪತ್ತೆಯಾಗಿತ್ತು. ಒಂದುವೇಳೆ ಇದು ಹಂತಕರು ಬಳಸಿದ ಮೊಬೈಲ್ ಆಗಿದ್ದರೆ ತನಿಖೆಗೆ ತುಂಬಾ ಸಹಕಾರಿಯಾಗಲಿದೆ ಎನ್ನಲಾಗ್ತಿದೆ.