ಪ್ರಧಾನಿ ನರೇಂದ್ರ ಮೋದಿ ಅವರು ಮುಂದಾಲೋಚನೆಯಿಲ್ಲದೆ 500, 1000 ರೂಪಾಯಿ ಬೆಲೆಯ ನೋಟ್ ಬ್ಯಾನ್ ಮಾಡಿ ಜನಸಮಾನ್ಯರು ಹಾಗೂ ಬಡವರನ್ನು ಬೀದಿಯಲ್ಲಿ ನಿಲ್ಲಿಸುವ ಮೂಲಕ ದೇಶದಲ್ಲಿ ಆರ್ಥಿಕ ತುರ್ತು ಪರಿಸ್ಥಿತಿ ತಂದಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಆರೋಪಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿದೇಶದಲ್ಲಿರುವ ಕಪ್ಪು ಹಣವನ್ನು ತರುತ್ತೇನೆ ಎಂದು ಹೇಳಿದ್ದ ಪ್ರಧಾನಿ ಮೋದಿ ಅದನ್ನು ಮರೆಮಾಚಲು ದೇಶದಲ್ಲಿ ಆರ್ಥಿಕ ತುರ್ತು ಪರಿಸ್ಥಿತಿ ಹೇರಿದ್ದಾರೆ. ಕಾಳಧನಿಕರ ವಿರುದ್ಧ ಕ್ರಮಕೈಗೊಳ್ಳುವುದನ್ನು ಬಿಟ್ಟು ಬಡವರು, ಜನಸಾಮಾನ್ಯರನ್ನು ಬ್ಯಾಂಕ್‌ಗಳು ಎಟಿಎಂ ಕೇಂದ್ರದ ಮುಂದಿ ದಿನವಿಡಿ ನಿಲ್ಲುವಂತೆ ಮಾಡಿದ್ದಾರೆ ಎಂದರು.
ಪ್ರಪಂಚವೇ ಆರ್ಥಿಕ ಬಿಕ್ಕಟ್ಟಿನಿಂದ ಸಂದರ್ಭದಲ್ಲಿ ನಮ್ಮ ಪ್ರಧಾನಿ ಮನಮೋಹನ್ ಸಿಂಗ್ ಅವರು ದೇಶದ ಆರ್ಥಿಕ ಸ್ಥಿತಿಯನ್ನು ಸುಭದ್ರಗೊಳಿಸಿ, ದೇಶವನ್ನು ವಿಶ್ವದಲ್ಲಿಯೇ 5 ನೇ ಸ್ಥಾನಕ್ಕೇರಿಸಿದ್ದರು. ಇದೀಗ ಪ್ರಧಾನಿ ಮೋದಿ ಅದನ್ನು ಹಾಳು ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಏಕಾಏಕಿ 500, 1000 ರೂಪಾಯಿ ನೋಟುಗಳನ್ನು ಬ್ಯಾನ್ ಮಾಡಿರುವುದರಿಂದ ಜನಸಾಮಾನ್ಯರು ಹಾಗೂ ಬಡವರು ಕಷ್ಟ ಅನುಭವಿಸುತ್ತಿದ್ದಾರೆ. ಯಾವ ಅನ್ಯಾಯವನ್ನು ಮಾಡದೆ ಇರುವ ಬಡವರು ನೋಟ್ ಬ್ಯಾನ್‌ನಿಂದ ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಬೇಸರ ವ್ಯಕ್ತಪಡಿಸಿದರು.