ನನ್ನ ಕ್ಷೇತ್ರಕ್ಕೆ ಮೇಯರ್ ಸ್ಥಾನ ಸಿಗಬೇಕು, ನನ್ನ ಸಹನೆಯ ಕಟ್ಟೆ ಒಡೆದಿದೆ: ಡಿ.ಕೆ. ಸುರೇಶ್ ಖಡಕ್ ವಾರ್ನಿಂಗ್
ಬುಧವಾರ, 20 ಸೆಪ್ಟಂಬರ್ 2017 (12:21 IST)
ಕಾಂಗ್ರೆಸ್`ನಲ್ಲಿ ನಮ್ಮನ್ನ ಕಡೆಗಣಿಸಲಾಗುತ್ತಿದೆ. ಅಭಿವೃದ್ಧಿ ಮತ್ತು ಅಧಿಕಾರ ಹಂಚಿಕೆಯಲ್ಲಿ ನಮ್ಮ ಕ್ಷೇತ್ರವನ್ನ ಕಡೆಗಣಿಸಲಾಗುತ್ತಿದೆ ಎಂದು ಸಂಸದ ಡಿ.ಕೆ. ಸುರೇಶ್ ಸುದ್ದಿಗೋಷ್ಠಿ ನಡೆಸಿ ಅಸಮಾಧಾನವನ್ನ ವ್ಯಕ್ತಪಡಿಸಿದ್ದಾರೆ.
ಎರಡು ಬಾರಿ ಬೆಂಗಳೂರು ಮೇಯರ್ ಆಯ್ಕೆ ನಡೆದಿದ್ದು, ನಮ್ಮನ್ನ ಕಡೆಗಣಿಸಲಾಗಿದೆ. ಈ ಬಾರಿ ನಮ್ಮನ್ನ ಕಡೆಗಣಿಸಬಾರದು. ನನ್ನ ಕ್ಷೇತ್ರಕ್ಕೆ ಮೇಯರ್ ಸ್ಥಾನ ನೀಡಬೇಕು. ಮೇಯರ್ ಆಯ್ಕೆಗೆ ನಡೆದ ಸಭೆಗೆ ನನ್ನನ್ನ ಆಹ್ವಾನಿಸಿರಲಿಲ್ಲ. ನನ್ನನ್ನ ಆಹ್ವಾನ ನೀಡಿದ್ದರೆ ಇವತ್ತು ಸುದ್ದಿಗೋಷ್ಠಿ ನಡೆಸುತ್ತಿರಲಿಲ್ಲ. ನನ್ನ ಸಹನೆಯ ಕಟ್ಟೆ ಒಡೆಯುತ್ತಿದೆ. ಸೀನಿಯಾರಿಟಿ ಆಧಾರದ ಮೇಲೆ ಮೇಯರ್ ಸ್ಥಾನ ಕೇಳುತ್ತಾರೆ. ಅಭಿವೃದ್ಧಿ ವಿಷಯದಲ್ಲಿ ಯಾವುದೇ ಸೀನಿಯಾರಿಟಿ ಇಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮೇಯರ್ ಆಯ್ಕೆ ಸಭೆಗೆ ನನ್ನನ್ನ ಆಹ್ವಾನಿಸಿಲ್ಲ. ಇದು ಪಕ್ಷಕ್ಕೆ ನನ್ನ ನೇರ ಸಂದೇಶ. ಅಭಿವೃದ್ಧಿ ಮತ್ತು ಅಧಿಕಾರ ಹಂಚಿಕೆ ವಿಷಯದಲ್ಲಾಗುತ್ತಿರುವ ತಾರತಮ್ಯದ ಬಗ್ಗೆ ಅಸಮಾಧಾನವಿದೆ. ನಮ್ಮ ಕ್ಷೇತ್ರದಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ವೇಲು ನಾಯಕ್, ಆಂಜಿನಪ್ಪ ಇದ್ದಾರೆ. ಅವರಲ್ಲಿ ಒಬ್ಬರನ್ನ ಆಯ್ಕೆ ಮಾಡಿ. ಈ ಭಾಗದಲ್ಲಿರುವ 4 ಸಂಸದರ ಪೈಕಿ ನಾನೊಬ್ಬನೇ ಕಾಂಗ್ರೆಸ್ ಸಂಸದ. ನನ್ನನ್ನ ಕಡೆಗಣಿಸಬಾರದು. ನಾನು ಇದ್ದೇನೆ ಎಂಬುದನ್ನ ನಾಯಕರು, ಜನರಿಗೆ ತಿಳಿಸಬೇಕಿದೆ ಎಂದು ಬೆಂಗಳೂರು ಗ್ರಾಮಾಂತರ ಸಂಸದ ಡಿ.ಕೆ. ಸುರೇಶ್ ಅಸಮಾಧಾನ ಹೊರ ಹಾಕಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ