ಸಿಎಂ ಸಿದ್ದರಾಮಯ್ಯ ವಿಚಾರಣೆ ಬೆನ್ನಲ್ಲೇ ಮುಡಾ ಸಭೆ: ಮಹತ್ವದ ನಿರ್ಧಾರದಿಂದ ಸೈಟು ಪಡೆದವರಿಗೆ ಟೆನ್ಷನ್

Krishnaveni K

ಗುರುವಾರ, 7 ನವೆಂಬರ್ 2024 (16:13 IST)
ಮೈಸೂರು: ಸಿಎಂ ಸಿದ್ದರಾಮಯ್ಯ ವಿರುದ್ಧ ಮುಡಾ ಸೈಟು ಅಕ್ರಮವಾಗಿ ಪಡೆದಿರುವ ಆರೋಪದ ಬಗ್ಗೆ ವಿಚಾರಣೆ ನಡೆದ ಬೆನ್ನಲ್ಲೇ ಇಂದು ಸಭೆ ನಡೆಸಲಾಗಿದ್ದು ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.

ಅಕ್ರಮ ಬೆಳಕಿಗೆ ಬಂದ ಬಳಿಕ ಮುಡಾ ಇಂದು ಇದೇ ಮೊದಲ ಬಾರಿಗೆ ಸಭೆ ನಡೆಸಿದೆ. ಈ ಸಭೆಯಲ್ಲಿ 50:50 ಅನುಪಾತದ ಅಡಿಯಲ್ಲಿ ನೀಡಲಾದ ಸೈಟು ಜಪ್ತಿ ಮಾಡಲು ತೀರ್ಮಾನಿಸಲಾಗಿದೆ. ಇದರಿಂದಾಗಿ 50:50 ಅನುಪಾತದಲ್ಲಿ ಸೈಟು ಪಡೆದವರಿಗೆ ಸೈಟು ಕಳೆದುಕೊಳ್ಳುವ ಟೆನ್ಷನ್ ಶುರುವಾಗಿದೆ.

ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಪಿಎನ್ ದೇಸಾಯಿ ನೇತೃತ್ವದ ಸಮಿತಿ ವರದಿ ಬಳಿಕ ಸೈಟು ಜಪ್ತಿ ಮಾಡಲು ಸಭೆಯಲ್ಲಿ ಒಮ್ಮತದ ನಿರ್ಧಾರ ಕೈಗೊಳ್ಳಲಾಗಿದೆ. ಸಭೆಯ ಬಳಿಕ ಮಾತನಾಡಿದ ಶಾಸಕ ಜಿಟಿ ದೇವೇಗೌಡ ’50:50 ಅನುಪಾತ ವಾಪಸ್ ಪಡೆಯಬೇಕು, ಅಕ್ರಮವಾಗಿರುವುದನ್ನು  ರದ್ದು ಮಾಡಬೇಕು. ಕಾನೂನಾತ್ಮಕವಾಗಿರುವವರಿಗೆ ನೀಡಬೇಕು ಎಂದು ತೀರ್ಮಾನಿಸಲಾಗಿದೆ’ ಎಂದಿದ್ದಾರೆ.

ರಾಜ್ಯ ಸರ್ಕಾರದ್ದು ಇದೇ ಪ್ಲ್ಯಾನ್ ಆಗಿತ್ತು. 50:50 ಅನುಪಾತದಲ್ಲಿ ನೀಡಲಾಗಿದ್ದ ಎಲ್ಲಾ ಸೈಟುಗಳನ್ನು ವಾಪಸ್ ಪಡೆಯಲು ನಗರಾಭಿವೃದ್ಧಿ ಕಾರ್ಯದರ್ಶಿಗಳಿಗೆ ಸ್ವತಃ ಸಿಎಂ ಸಿದ್ದರಾಮಯ್ಯ ಲಿಖಿತ ಆದೇಶ ನೀಡಿದ್ದರು. ಕಳೆದ ನಾಲ್ಕು ವರ್ಷಗಳಲ್ಲಿ 1,500 ಕ್ಕೂ ಹೆಚ್ಚು 50:50 ಅನುಪಾತದಡಿಯಲ್ಲಿ ಸೈಟು ಹಂಚಿಕೆಯಾಗಿದೆ. ಇವೆಲ್ಲವೂ ಜಪ್ತಿಯಾಗುವ ಸಾಧ್ಯತೆಯಿದೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ