ರಾಜ್ಯದಲ್ಲಿರುವ ಮೂರು ರಾಜಕೀಯ ಪಕ್ಷಗಳಲ್ಲಿ ಪ್ರಮಾಣಿಕರೇ ಅಸ್ಪೃಶ್ಯರು ಎಂದು ಆಮ್ ಆದ್ಮಿ ಪಕ್ಷಕ್ಕೆ ಸೇರ್ಪಡೆಯಾದ ನಟ ಹಾಗೂ ಮಾಜಿ ವಿಧಾನ ಪರಿಷತ್ ಸದಸ್ಯ ಮುಖ್ಯಮಂತ್ರಿ ಚಂದ್ರು ಆರೋಪಿಸಿದ್ದಾರೆ.
ಬೆಂಗಳೂರಿನಲ್ಲಿ ಮಂಗಳವಾರ ಆಪ್ ಆದ್ಮಿ ಪಕ್ಷಕ್ಕೆ ಸೇರ್ಪಡೆಯಾದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಪಕ್ಷಗಳಲ್ಲಿ ಪ್ರಾಮಾಣಿಕರು ಅಸ್ಪೃಶ್ಯರಾಗಿದ್ದಾರೆ. ಮೂರು ಪಕ್ಷಗಳಿಂದ ರಾಜ್ಯದ ಜನತೆಗೆ ದ್ರೋಹವಾಗಿದೆ. ಮುಂದೆಯೂ ದ್ರೋಹ ಮಾಡಲು ಹವಣಿಕೆ ಮಾಡುತ್ತಿವೆ ಎಂದರು.
ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಯನ್ನು ಕೇವಲ ವಿಸರ್ಜನೆ ಮಾಡಿದರೆ ಸಾಲದು. ಈಗಿ ಪರಿಷ್ಕರಣೆಯನ್ನು ಹಿಂಪಡೆದು, ಚುನಾವಣೆವರೆಗೂ ಹಳೆಯ ಪಠ್ಯಕ್ರಮವನ್ನೇ ಮುಂದುವರಿಸಬೇಕು. ಬೇರೆ ಪಕ್ಷಗಳಲ್ಲಿ ಮೂಲೆಗುಂಪಾಗಿರುವ ಸಹೃದಯದಿ ಹಾಗೂ ಪ್ರಾಮಾಣಿಕರು ನಾಯಕರು ಹೆಚ್ಚಿನ ಸಂಖ್ಯೆಯಲ್ಲಿ ಆಮ್ ಆದ್ಮಿ ಪಾರ್ಟಿ ಸೇರಬೇಕು ಎಂದು ಕರೆ ನೀಡಿದರು.
ಆಮ್ ಆದ್ಮಿ ಪಾರ್ಟಿಯು ದೇಶದ ರಾಜಕೀಯವನ್ನು ಸರಿದಾರಿಗೆ ತರುತ್ತಿದೆ. ಬೇರೆಲ್ಲ ಪಕ್ಷಗಳು ಶಿಕ್ಷಣ - ಆರೋಗ್ಯ ಕ್ಷೇತ್ರಗಳನ್ನು ನಿರ್ಲಕ್ಷ್ಯಿಸಿದರೆ, ಆಮ್ ಆದ್ಮಿ ಪಾರ್ಟಿ ಸರ್ಕಾರವು ಇವುಗಳಿಗೆ ಹೆಚ್ಚಿನ ಆದ್ಯತೆ ನೀಡಿದೆ. ಈ ಮೂಲಕ ಸಮಾಜದ ಭವಿಷ್ಯವನ್ನು ಬಲಪಡಿಸುತ್ತಿದೆ. ಕರ್ನಾಟಕದಲ್ಲಿ ಎಎಪಿ ಅಧಿಕಾರ ಬಂದು ಇಲ್ಲಿ ಕೂಡ ಪಾರದರ್ಶಕ ಹಾಗೂ ಜನಪರ ಆಡಳಿತ ನೀಡಿ ಜನ ನೆಮ್ಮದಿಯಿಂದ ಬದುಕುವಂತಹ ವಾತಾವರಣ ಮೂಡಬೇಕಿದೆ” ಎಂದು ಮುಖ್ಯಮಂತ್ರಿ ಚಂದ್ರು ಹೇಳಿದರು.
ಮುಖ್ಯಮಂತ್ರಿ ಚಂದ್ರುರವರನ್ನು ಪಕ್ಷಕ್ಕೆ ಬರಮಾಡಿಕೊಂಡ ನಂತರ ಮಾತನಾಡಿದ ಆಪ್ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ, “ಮುಖ್ಯಮಂತ್ರಿ ಚಂದ್ರುರವರು ನಾಡು, ನುಡಿ, ಜಲಕ್ಕಾಗಿ ಸಾಕಷ್ಟು ಕೆಲಸ ಮಾಡಿದ್ದಾರೆ. ಇವುಗಳ ರಕ್ಷಣೆಯು ನಮ್ಮ ಪಕ್ಷದ ಮೂಲ ಸಿದ್ಧಾಂತ ಕೂಡ ಆಗಿದೆ. ಸತತ ನಲವತ್ತಕ್ಕೂ ಹೆಚ್ಚು ವರ್ಷಗಳ ಕಾಲ ಮುಖ್ಯಮಂತ್ರಿ ನಾಟಕದ ಮೂಲಕ ರಾಜಕೀಯ ಕ್ಷೇತ್ರವನ್ನು ಶುದ್ಧೀಕರಣ ಮಾಡುವ ದಿಶೆಯಲ್ಲಿ ಚಂದ್ರುರವರು ಸಾಕಷ್ಟು ಶ್ರಮಿಸಿದ್ದಾರೆ ” ಎಂದು ಹೇಳಿದರು.