ಬಿಜೆಪಿ ಶಾಸಕ ಮುನಿರತ್ನ ಪ್ರಕರಣದ ವಿಚಾರಣೆ ನಡೆಸಲು ರಾಜ್ಯ ಸರ್ಕಾರ ಎಸ್ಐಟಿ ರಚನೆ ಮಾಡಿದೆ. ಇದೀಗ ಮಹಿಳೆಯ ದೂರು ಆಧರಿಸಿ ಮುನಿರತ್ನರನ್ನು ಎಸ್ಐಟಿ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದೆ. ಇದರ ನಡುವೆ ಅವರ ಮೇಲಿದ್ದ ಜೀವ ಬೆದರಿಕೆ, ಜಾತಿನಿಂದನೆ ಪ್ರಕರಣದಲ್ಲಿ ಅವರಿಗೆ ಜಾಮೀನು ಸಿಕ್ಕಿದೆ.
ಆದರೆ ಲೈಂಗಿಕ ಕಿರುಕುಳ ಕೇಸ್ ಅವರಿಗೆ ಬಿಗಿಯಾಗುತ್ತಿದೆ. ತನ್ನ ಮೇಲೆ ಶಾಸಕ ಮುನಿರತ್ನ, ವಿಧಾನಸೌಧ, ವಿಕಾಸಸೌಧ ಮತ್ತು ಸರ್ಕಾರೀ ಕಾರಿನಲ್ಲೂ ಅತ್ಯಾಚಾರವೆಸಗಿದ್ದಾರೆ ಎಂದು ಸಂತ್ರಸ್ತೆ ಹೇಳಿಕೆ ನೀಡಿದ್ದಾಳೆ. ಪ್ರಜಾಪ್ರಭುತ್ವದ ದೇವಾಲಯ ಎಂದೇ ಕರೆಸಿಕೊಳ್ಳುವ ವಿಧಾನಸೌಧದಲ್ಲೂ ಮುನಿರತ್ನ ರೇಪ್ ಮಾಡಿದ್ದಾರೆ ಎಂಬ ಆರೋಪ ನಿಜಕ್ಕೂ ಶಾಕಿಂಗ್ ಆಗಿದೆ.
ಸಂತ್ರಸ್ತೆ ಮಾಡಿರುವ ಆರೋಪಗಳನ್ನಿಟ್ಟುಕೊಂಡು ಪೊಲೀಸರು ಮುನಿರತ್ನರನ್ನು ವಿಚಾರಣೆ ನಡೆಸುತ್ತಿದ್ದಾರೆ. ನಾಳೆ ಮುನಿರತ್ನ ಪುರುಷತ್ವ ಪರೀಕ್ಷೆಗೊಳಪಡುವ ಸಾಧ್ಯತೆಯಿದೆ. ಸಂತ್ರಸ್ತೆ ವಿಡಿಯೋ ಕಾಲ್ ಮಾಡಿ ಬೆತ್ತಲಾಗುವಂತೆ ಒತ್ತಾಯ ಮಾಡಿದ್ದರು ಎನ್ನಲಾದ ಮೊಬೈಲ್ ಬಗ್ಗೆ ಪೊಲೀಸರು ಪ್ರಶ್ನೆ ಮಾಡಿದ್ದು ಇದು ಕಳುವಾಗಿದೆ ಎಂದು ಮುನಿರತ್ನ ಹೇಳಿದ್ದಾರೆ. ಆದರೆ ಮೊಬೈಲ್ ಐಎಂಇಐ ನಂಬರ್ ಪಡೆದು ಶೋಧ ನಡೆಸುತ್ತಿದ್ದಾರೆ.