ಮೈಸೂರು: ರಾಜ್ಯದಲ್ಲಿ ಮಂತ್ರಿ ಮಾಡಿದ್ದರೆ ರಾಜ್ಯ ಸುತ್ತುತ್ತಿದ್ದೆ. ನನಗೆ ಕೇವಲ ಕೆ.ಆರ್ ಕ್ಷೇತ್ರಕ್ಕೆ ಸೀಮಿತ ಮಾಡಿದ್ದಾರೆ. ಅದಕ್ಕೆ ಮಾತ್ರ ಸೀಮಿತಗೊಂಡು ಕೆಲಸ ಮಾಡುತ್ತೇನೆ ಎಂದು ಮೈಸೂರು ಬಿಜೆಪಿ ಶಾಸಕ ಎಸ್.ಎ. ರಾಮದಾ
ಸ್ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.
ಮೈಸೂರಿನಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಟೀಲ್ ಅವರೇ ನನಗೆ ಕರೆ ಮಾಡಿ ನಿಮಗೆ ಸಚಿವ ಸ್ಥಾನ ಕೊಡಬೇಕೆಂದು ಸಂಘ ಪಕ್ಷ ಸೂಚಿಸಿದೆ ಎಂದು ಹೇಳಿದ್ದರು. ಅಲ್ಲದೇ ಸಚಿವರ ಪಟ್ಟಿಯಲ್ಲೂ ಮೊದಲ ಸ್ಥಾನದಲ್ಲಿದೆ ನಿಮ್ಮ ಹೆಸರು ಎಂದಿದ್ದರು. ಆದರೆ ಅದಾದ ಎರಡು ಗಂಟೆ ಬಳಿಕ ಯಾರೋ ಕರೆ ಮಾಡಿ ಸಚಿವ ಸ್ಥಾನ ತಪ್ಪಿಸಿದ್ದಾರೆ ಎಂದು ಅವರು ಹೇಳಿದರು.
ಟಿಕೆಟ್ ತಪ್ಪಿಸಿದ ವ್ಯಕ್ತಿಗೆ ನಾನು ಕರೆ ಮಾಡಿ ಧನ್ಯವಾದ ಹೇಳಿದೆ. ಈ ರೀತಿ ಮಾಡಿದ್ದೀರಾ ಎಂದು ಧನ್ಯವಾದ ಹೇಳಿದೆ. ನಾನು ಹಾಗೆ ಮಾಡಿಲ್ಲ ನಿಮಗೆ ಯಾರು ಹೇಳಿದ್ದು ಎಂದು ಆ ವ್ಯಕ್ತಿ ಕೇಳಿದರು. ನನಗೆ ಮೈಸೂರಿನಿಂದ ದೆಹಲಿವರೆಗೂ ಪರಿಚಯಸ್ಥರು ಇದ್ದಾರೆ ಎಂದು ಆ ವ್ಯಕ್ತಿಗೆ ಹೇಳಿದೆ. ಆದರೆ ಈ ರೀತಿ ಮಾಡುವುದು ಪಕ್ಷದಲ್ಲಿದ್ದುಕೊಂಡು ಸರಿಯಲ್ಲ. ಪಟ್ಟಿ ಅಂತಿಮವಾದ ಬಳಿಕ ನನ್ನ ಹೆಸರು ಕೈ ಬಿಡಿಸಿದರು ಎಂದು ಅವರು ಹೇಳಿದರು.
ಕಾಣದ ಕೈ ಮಾಡಿದ ಒಂದು ಕರೆಯಿಂದ ನನಗೆ ಸಚಿವ ಸ್ಥಾನ ತಪ್ಪಿತು. ಇದು ಬೆನ್ನಿಗೆ ಹಾಕಿದ ಚೂರಿ ಎಂದು ಎಲ್ಲರೂ ಹೇಳುತ್ತಾರೆ. ಆದರೆ ಈ ಬಗ್ಗೆ ನಾನು ಏನು ಮಾತಾಡಲ್ಲ. ನಾನು ನನ್ನ ಕ್ಷೇತ್ರವನ್ನೇ ದೇಶ ರಾಜ್ಯ ಎಂದು ಭಾವಿಸಿ ಕೆಲಸ ಮಾಡುತ್ತೇನೆ. ನನ್ನ ಪಕ್ಷವೇ ಕೆ.ಆರ್ ಕ್ಷೇತ್ರಕ್ಕೆ ಸೀಮಿತಗೊಳಿಸಿದ ಕಾರಣ ನಾನು ಇಲ್ಲಿಯೇ ಕೆಲಸ ಮಾಡಿಕೊಂಡು ಇರುತ್ತೇನೆ ಎಂದು ರಾಮದಾಸ್ ವಿವರಿಸಿದರು.