ಕೊಲೆಯ ರಹಸ್ಯ : ಜೊತೆಗಾರನೇ ಹಂತಕನಾಗಿದ್ದೇಕೆ?!

ಗುರುವಾರ, 2 ಡಿಸೆಂಬರ್ 2021 (09:04 IST)
ಚಿಕ್ಕಮಗಳೂರು : ಮನೆಯಲ್ಲಿದ್ದ ವ್ಯಕ್ತಿಯನ್ನ ಕೆಲಸಕ್ಕೆಂದು ಕರೆದುಕೊಂಡು ಹೋಗಿ ಕೊಂದು ಕಾಡಿನ ಮಧ್ಯೆ ಹೂತು ಹಾಕಿರುವ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಸಮೀಪದ ಬಿದರುತಳ ಗ್ರಾಮದಲ್ಲಿ ನಡೆದಿದೆ.
46 ವರ್ಷದ ನಾಗೇಶ್ ಆಚಾರ್ ಮೃತ ದುರ್ದೈವಿ.
ಮನೆಯಲ್ಲಿದ್ದ ವ್ಯಕ್ತಿಯಯನ್ನು ಕೆಲ್ಸ ಇದೆ ಬಾ ಎಂದು ಆ ಕಿರಾತಕ ಕರೆದುಕೊಂಡು ಹೋಗಿದ್ದ. ಕಳೆದ ಗುರುವಾರ ತನ್ನ ಮನೆಯಿಂದ ಹೊರಗೆ ಹೋದ ವ್ಯಕ್ತಿ ಮತ್ತೆ ವಾಪಸ್ ಬರಲೇ ಇಲ್ಲ. ಕರೆದುಕೊಂಡು ಹೋದವನನ್ನ ಕೇಳಿದ್ರೆ ನಂಗೆ ಗೊತ್ತೇ ಇಲ್ಲ ಎಂದು ಬಿಟ್ಟಿದ್ದ.
ಪೊಲೀಸರು, ಸ್ಥಳೀಯರೇ ಜೊತೆ ಎರಡು ದಿನ ಚಾರ್ಮಾಡಿ ಘಾಟ್ ನಲ್ಲಿ ಹುಡುಕಾಟದ ನಾಟಕ ಕೂಡ ಮಾಡಿದ್ದ. ಆದ್ರೂ ಆತನ ಮಾತನ್ನ ನಂಬದ ಜನರು ನಾಪತ್ತೆಯಾಗಿದ್ದ ವ್ಯಕ್ತಿಗಾಗಿ ಚಾರ್ಮಾಡಿ ಘಾಟ್ ಇಂಚಿಂಚೂ ಶೋಧ ನಡೆಸಿದ್ರು. ಕೊನೆಗೂ ಮುಖಕ್ಕೆ ಗುಂಡಿಟ್ಟು ಕೊಂದು ಮಣ್ಣಿನಡಿ ಹೂತಿಟ್ಟಿದ್ದ ಮೃತದೇಹ ಚಾರ್ಮಾಡಿ ದಟ್ಟಾರಣ್ಯದ ಮಧ್ಯೆ ಪತ್ತೆಯಾಗಿದೆ.
ಈ ಬಗ್ಗೆ ನಾಗೇಶ್ ಮನೆಯವರು ಕೃಷ್ಣೇಗೌಡನ ಬಳಿ ಕೇಳಿದ್ರೆ ಅವರು ಎಲ್ಲಿ ಹೋದ್ರೋ ನನಗೆ ಗೊತ್ತೆ ಇಲ್ಲ ಅಂತಾ ನಾಟಕ ಮಾಡಿದ್ದ. ಅನುಮಾನಗೊಂಡು ಚಾರ್ಮಾಡಿ ಘಾಟ್ ನ ಹಲವೆಡೆ ನೂರಾರು ಜನರು ಸೋಮವಾರ-ಮಂಗಳವಾರ ಹುಡುಕಾಟ ನಡೆಸಿದ್ರು. ವಿಪರ್ಯಾಸವೆಂದ್ರೆ ಈ ಹುಡುಕಾಟದಲ್ಲಿ ಆರೋಪಿ ಕೃಷ್ಣೇಗೌಡ ಕೂಡ ಭಾಗಿಯಾಗಿದ್ದ.
ನಿನ್ನೆ ಸಂಜೆ ಸ್ಥಳೀಯರೊಬ್ಬರು ಹುಡುಕಾಟ ನಡೆಸುವಾಗ ವಾಸನೆ ಬಂದಿದೆ. ಅದೇ ಮಾರ್ಗದಲ್ಲಿ ಹುಡುಕಿಕೊಂಡು ಹೋದಾಗ ನಾಗರಾಜ್ ಆಚಾರ್ ಮೃತದೇಹವಿರೋದು ಕನ್ಫರ್ಮ್ ಆಗಿದೆ. ಇಂದು ಬೆಳಗ್ಗೆ ಸ್ಥಳಕ್ಕೆ ಆಗಮಿಸಿದ್ದ ತಹಶೀಲ್ದಾರ್ ನಾಗರಾಜ್ ಸಮಕ್ಷಮದಲ್ಲಿ ಮಣ್ಣಿನಡಿ ಹೂತಿಟ್ಟಿದ್ದ ಶವವನ್ನ ಹೊರತೆಗೆಯಲಾಯ್ತು. ಪ್ರಪಾತದಲ್ಲಿ ಬಿದ್ದಿದ್ದ ಮೃತದೇಹವನ್ನ ಮೇಲಕ್ಕೆ ಎತ್ತಿಕೊಂಡು ಬಂದಾಗ ಕುಟುಂಬಸ್ಥರು ಆಕ್ರಂದನ ಮುಗಿಲು ಮುಟ್ಟಿತ್ತು.
ಆರೋಪಿ ಕೃಷ್ಣೇಗೌಡ ಮೂಲತಃ ಬಿದಿರುತಳ ಗ್ರಾಮದವನು, ಸದ್ಯ ಬಾಳೂರಿನಲ್ಲಿ ವಾಸವಿದ್ದಾನೆ. ಆದ್ರೆ ಪ್ರಕೃತಿಯ ಸೌಂದರ್ಯವನ್ನೇ ಹೊದ್ದು ಮಲಗಿರೋ ಬಿದಿರುತಳದಲ್ಲಿ ಹೊಂ ಸ್ಟೇ ಒಂದನ್ನ ನಿರ್ಮಾಣ ಮಾಡುತ್ತಿದ್ದ. ಇದಕ್ಕಾಗಿ ಬಾಳೂರು ಸಂರಕ್ಷಿತ ಅರಣ್ಯದಲ್ಲಿ ಎರಡು ತಿಂಗಳ ಹಿಂದೆ ಸುಮಾರು 100 ಮರಗಳ ಹನನ ಕೂಡ ಮಾಡಿದ್ದ. ಇಷ್ಟಾದ್ರೂ ಸ್ಥಳೀಯ ಅರಣ್ಯ ಇಲಾಖೆ ಅಧಿಕಾರಿಗಳು ಯಾರೂ ಕೂಡ ತಲೆ ಕೆಡಿಸಿಕೊಂಡಿರಲಿಲ್ಲ.
ಮನೆಯಲ್ಲಿದ್ದವನನ್ನ ಕರೆದುಕೊಂಡು ಹೋಗಿ ಕೊಲೆ ಮಾಡಿ, ಏನೂ ಗೊತ್ತಿಲ್ಲದಂತೆ ನಾಟಕ ಮಾಡಿದ ಕೃಷ್ಣೇಗೌಡ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ. ಹೆಣ ಸಾಗಿಸಲು ಸಹಕಾರ ನೀಡಿದ ಮತ್ತಿಬ್ಬರು ಆರೋಪಿಗಳನ್ನ ಕೂಡ ಬಾಳೂರು ಪೊಲೀಸರು ಬಂಧಿಸಿದ್ದಾರೆ. ಅಪ್ಪನನ್ನ ಕಳೆದುಕೊಂಡು ಮಗಳು ಕಣ್ಣೀರು ಹಾಕ್ತಿದ್ರೆ, ಗಂಡನನ್ನ ಕಳೆದುಕೊಂಡು ಪತ್ನಿ ಕಂಗಲಾಗಿದ್ದಾಳೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ