ಮಂಡ್ಯ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ, ವಿಪಕ್ಷ ನಾಯಕ ಆರ್ ಅಶೋಕ್, ನಾಯಕರಾದ ಸಿಟಿ ರವಿ, ಅಶ್ವಥ್‌ನಾರಾಯಣ, ಸುನೀಲ್ ಕುಮಾರ್ ಸೇರಿದಂತೆ ಬಿಜೆಪಿ ನಾಯಕರು ಗಲಭೆಯಾದ ನಾಗಮಂಗಲಕ್ಕೆ ಭೇಟಿ ನೀಡಿ ವಿಚಾರಿಸಿದರು.
ಈ ವೇಳೆ ಘಟನೆಯಲ್ಲಿ ತಮ್ಮವರನ್ನು ಸುಖಾಸುಮ್ಮನೆ ಕರೆದುಕೊಂಡು ಹೋಗಿದ್ದಾರೆ. ಮಾಡಿದ್ದೆಲ್ಲ ಅವರು, ಎತ್ತಾಕಿಕೊಂಡು ಹೋಗಿದ್ದು ನಮ್ಮವರನ್ನು ಎಂದು ಮಹಿಳೆಯೊಬ್ಬರು ವಿಜಯೇಂದ್ರ ಬಳಿ ತಮ್ಮ ಅಳಲನ್ನು ತೋಡಿಕೊಂಡರು.
ಬೆಂಕಿ ಹಾಕಿದ್ದೆಲ್ಲ ಅವರು, ಮಾಡಿದ್ದೆಲ್ಲ ಅವರು. ಇದೀಗ ನಮ್ಮ ಹುಡುಗರನ್ನು ಎತ್ತಾಕಿಕೊಂಡು ಹೋಗಿದ್ದಾರೆ. ಈ ಸಂಬಂಧ ಎಸ್‌ಪಿ ಅವರ ಜತೆ ಮಾತನಾಡಿ ನ್ಯಾಯ ಒದಗಿಸುತ್ತೇನೆಂದು ವಿಜಯೇಂದ್ರ ಭರವಸೆ ನೀಡಿದರು.
ನಂತರ ಮಾಧ್ಯಮಗಳ ಜತೆ ಮಾತನಾಡಿದ ವಿಜಯೇಂದ್ರ ಅವರು, ಹಿಂದೂ ಯುವಕರು ಶಾಂತಿಯುತವಾಗಿ ಗಣಪತಿ ವಿಸರ್ಜನೆ ಮೆರವಣಿಗೆ ಮಾಡುತ್ತಿದ್ದರು. ಇದೆಲ್ಲ ಪೂರ್ವನಿಯೋಜಿತ ಕೃತ್ಯ. ದೇಶದ್ರೋಹಿಗಳು ಹಿಂದೂ ಕಾರ್ಯಕರ್ತರ ಮೇಲೆ ಕಲ್ಲು ತೂರಾಟ ನಡೆಸಿ, ತಲವಾರ್‌ನಿಂದ ಹಲ್ಲೆಗೆ ಮುಂದಾಗಿದ್ದಾರೆ. ಅಂಗಡಿಗಳಿಗೆ ಬೆಂಕಿ ಹಚ್ಚಿ ಅಟ್ಟಹಾಸ ಮೆರೆದಿದ್ದಾರೆ. ಇಷ್ಟಾದ್ರೂ ಮಾತ್ರ ಪೊಲಿಸರು ಕೈ ಕಟ್ಟಿ ಕುಳಿತಿದ್ದಾರೆ. ಕಾಂಗ್ರೆಸ್ ಸರ್ಕಾರದ ಹಿಂದೂ ವಿರೋಧಿ ನಡವಳಿಕೆಯಿಂದಾಗಿ ದೇಶದ್ರೋಹಿಗಳು ಇಂತಹ ಅಟ್ಟಹಾಸ ಮೆರೆಯುತ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.