ತಮಿಳುನಾಡಿನ ತಿರುಣ್ಣಾಮಲೈನಿಂದ ಕರೆದುಕೊಂಡು ಬರುವ ವೇಳೆ ಮೂತ್ರ ವಿಸರ್ಜನೆಗೆ ನಿಲ್ಲಿಸಿ ಎಂದು ಆರೋಪಿ ನೈಸ್ ರೋಡಲ್ಲಿ ಕೇಳಿಕೊಂಡಿದ್ದ. ಆದರೆ ಇದಕ್ಕೆ ಅವಕಾಶ ಕೊಡದ ಪೊಲೀಸರು ಬೆಂಗಳೂರು ಸಿಟಿಯ ಕೆಂಗೇರಿ ಮೇಲ್ಸೇತುವೆ ಬಳಿ ನಿಲ್ಲಿಸಿದ್ದರು.ಈ ವೇಳೆ ನಾಗೇಶ್ ಪೊಲೀಸರಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಕೂಡಲೇ ಕಾನ್ಸ್ಟೇಬಲ್ ಮಹಾದೇವಯ್ಯ ನಾಗೇಶ್‌ನನ್ನು ಹಿಡಿಯಲು ಹೋಗಿದ್ದಾನೆ. ಆದರೆ ಅಷ್ಟರಲ್ಲೇ ಆರೋಪಿ ಮಹಾದೇವಯ್ಯ ಮೇಲೆಡ ಕಲ್ಲಿನಿಂದ ಹಲ್ಲೆ ಮಾಡಿ ತಪ್ಪಿಸಿಕೊಳ್ಳಲು ಮುಂದಾಗಿದ್ದಾನೆ.
ಈ ವೇಳೆ ಇನ್ಸ್ಪೆಕ್ಟರ್ ಪ್ರಶಾಂತ್ ಆರೋಪಿಯನ್ನ ಹಿಡಿಯಲು ಗಾಳಿಯಲ್ಲಿ ಒಂದು ಬಾರಿ ಗುಂಡು ಹಾರಿಸಿ ಎಚ್ಚರಿಕೆ ನೀಡಿದ್ದರು. ಆದರೆ ನಾಗೇಶ್ ಮಾತ್ರ ಇನ್ಸ್ಪೆಕ್ಟರ್ ಎಚ್ಚರಿಕೆಗೆ ಬಗ್ಗದೆ ತಪ್ಪಿಸಿಕೊಳ್ಳಲು ಮುಂದಾಗಿದ್ದಾನೆ. ಅಗ ಪೊಲೀಸರು ಆರೋಪಿ ನಾಗೇಶ್ ಬಲಗಾಲಿಗೆ ಗುಂಡು ಹೊಡೆದು ಬಂಧಿಸಿದ್ದಾರೆ. ಸದ್ಯ ಗುಂಡೇಟು ತಿಂದ ಆರೋಪಿಗೆ ರಾಜರಾಜೇಶ್ವರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದ್ದು, ಹೆಚ್ಚಿನ ಚಿಕಿತ್ಸೆಗೆ ಬಿಜಿಎಸ್ ಆಸ್ಪತ್ರೆಗೆ ಆರೋಪಿಯನ್ನು ದಾಖಲು ಮಾಡಲಾಗಿದೆ.
ಆ್ಯಸಿಡ್ ದಾಳಿ ಬಳಿಕ ತಲೆಮರೆಸಿಕೊಂಡಿದ್ದ ನಾಗೇಶ್ ಬಂಧನಕ್ಕೆ ಪೊಲೀಸರ 10 ವಿಶೇಷ ತಂಡ ರಚಿಸಿ ಕಾರ್ಯಾಚರಣೆ ಚುರುಕುಗೊಳಿಸಲಾಗಿತ್ತು. ಆರೋಪಿಯ ಬಗ್ಗೆ ಸಣ್ಣ ಸುಳಿವು ಸಿಗದ ಪರಿಣಾಮ ಕನ್ನಡ, ತೆಲುಗು, ತಮಿಳು, ಇಂಗ್ಲಿಷ್ ಭಾಷೆಯಲ್ಲಿ ಆರೋಪಿಯ ಭಾವಚಿತ್ರ ಸಹಿತ ಕರಪತ್ರ ಮುದ್ರಿಸಿ ನೆರೆಯ ತಮಿಳುನಾಡು, ಆಂಧ್ರಪ್ರದೇಶ, ಕೇರಳ, ತೆಲಂಗಾಣ ಸೇರಿದಂತೆ ಹಲವು ರಾಜ್ಯಗಳ ಸಾರ್ವಜನಿಕ ಸ್ಥಳಗಳು, ದೇವಸ್ಥಾನಗಳು, ಆಶ್ರಯಮಗಳು, ಮಠಗಳು ಸೇರಿದಂತೆ ಸಾರ್ವಜನಿಕರು ಹೆಚ್ಚು ಸೇರುವ ಸ್ಥಳಗಳಲ್ಲಿ ಹಂಚಲಾಗಿತ್ತು.
ಹೆಗ್ಗನಹಳ್ಳಿ ನಿವಾಸಿಯಾಗಿರುವ ಆರೋಪಿ ನಾಗೇಶ್ ತನ್ನನ್ನು ಪ್ರೀತಿಸುವಂತೆ 25 ವರ್ಷದ ಯುವತಿ ಹಿಂದೆ ಬಂದಿದ್ದ. ಪ್ರೀತಿ ನಿರಾಕರಿಸಿದ್ದ ಯುವತಿ ತನ್ನಪಾಡಿಗೆ ತಾನು ಇದ್ದಳು. ಎಂಕಾಂ ಪದವಿಧರೆಯಾದ ಯುವತಿ ಖಾಸಗಿ ಫೈನಾನ್ಸ್ ಕಂಪನಿಯಲ್ಲಿ ಕೆಲಸಕ್ಕೆ ಸೇರಿದ್ದಳು. ಏ.28ರಂದು ಬೆಳಗ್ಗೆ ಸುಂಕದಕಟ್ಟೆಯಲ್ಲಿರುವ ಕಂಪನಿಯ ಕಚೇರಿ ಬಳಿ ಬಂದಿದ್ದಳು. ಈ ವೇಳೆ ಆ್ಯಸಿಡ್ ತುಂಬಿದ ಬಾಟಲಿಯೊಂದಿಗೆ ಪ್ರತ್ಯಕ್ಷನಾದ ಕಿಡಿಗೇಡಿ ನಾಗೇಶ್, ಏಕಾಏಕಿ ಯುವತಿ ಮೇಲೆ ಆ್ಯಸಿಡ್ ದಾಳಿ ನಡೆಸಿ ಪರಾರಿಯಾಗಿದ್ದ. ಈ ಸಂಬಂಧ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.