ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ತನಿಖೆಯನ್ನು ಸರ್ಕಾರ ಎನ್ಐಎಗೆ ಕೊಟ್ಟು ನಮ್ಮಲ್ಲಿರುವ ಉತ್ತಮ ಪೊಲೀಸ್ ಅಧಿಕಾರಿಗಳ ಆತ್ಮಸ್ಥೈರ್ಯವನ್ನು ಕುಸಿಯುವಂತೆ ಮಾಡಿದೆ. ಎನ್ಐಎಗೆ ಈ ಹಿಂದೆ ಕೊಟ್ಟ ಯಾವುದೇ ಪ್ರಕರಣವನ್ನು ಸರಿಯಾದ ರೀತಿಯಲ್ಲಿ ತನಿಖೆ ಮಾಡಿಲ್ಲ. ಆದರೆ ಈ ಪ್ರಕರಣವನ್ನು ಎನ್ಐಎ ಕಾಟಾಚಾರಕ್ಕೆ ತನಿಖೆ ಮಾಡಬಾರದು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಆಗ್ರಹಿಸಿದ್ದಾರೆ.
ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ: ಹೆಚ್ ಡಿ ಕುಮಾರಸ್ವಾಮಿ ಪ್ರತಿಕ್ರಿಯೆಇಂದು ಬೆಳಗೆ ಬೆಳ್ಳಾರೆಯಲ್ಲಿ ಹತ್ಯೆಯಾದ ಪ್ರವೀಣ್ ನೆಟ್ಟಾರು ಹಾಗೂ ವಿಷ್ಣುನಗರ ಕಲೆಂಜದ ಮಹಮ್ಮದ್ ಮಸೂದ್ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದರು. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸರ್ಕಾರಕ್ಕೆ ಹೇಳುವುದು ಇಷ್ಟೇ. ಈ ಪ್ರಕರಣದ ತನಿಖೆ ಕಾಟಾಚಾರಕ್ಕೆ ಆಗಬಾರದು. ಈಗಾಗಲೇ ನಮ್ಮಲ್ಲಿ ಸಮರ್ಪಕವಾಗಿ ತನಿಖೆ ಮಾಡುವ ಅಧಿಕಾರಿಗಳನ್ನು ಬದಿಗೊತ್ತಿ ತನಿಖೆ ಮಾಡಲಾಗುತ್ತಿದೆ. ಯಾವುದೇ ಕಾರಣಕ್ಕೂ ಈ ಕುಟುಂಬಗಳು ನ್ಯಾಯದಿಂದ ವಂಚಿತರಾಗಬಾರದು ಎಂದರು.