ಬರಗಾಲ ಹಿನ್ನೆಲೆಯಲ್ಲಿ ಎಲ್ಲಾ ಕಡೆ ನೀರಿನ ಮಟ್ಟ ಕಡಿಮೆಯಾಗಿ ವಿದ್ಯುತ್ ಉತ್ಪಾದನೆ ಕಡಿತವಾಗಿದ್ದರೂ, ಬೇಸಿಗೆಯಲ್ಲಿ ಲೋಡ್‍ಶೆಡ್ಡಿಂಗ್ ತಪ್ಪಿಸಲು ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಇಂಧನ ಸಚಿವ ಡಿ.ಕೆ.ಶಿವಕುಮಾರ್ ವಿಧಾನಸಭೆಯಲ್ಲಿಂದು ತಿಳಿಸಿದರು.
ಶಾಸಕ ಡಿ.ಸಿ.ತಮ್ಮಣ್ಣ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ರಾಯಚೂರು ಶಾಖೋತ್ಪನ್ನ ಕೇಂದ್ರಕ್ಕೂ ಸಮರ್ಪಕವಾಗಿ ನೀರು ಪೂರೈಸಲು ಸಾಧ್ಯವಾಗುತ್ತಿಲ್ಲ. ಎಲ್ಲಾ ಮೂಲಗಳಿಂದ ರಾಜ್ಯದ ವಿದ್ಯುತ್ ಉತ್ಪಾದನಾ ಸಾಮಥ್ರ್ಯ 18015ಮೆಗಾವ್ಯಾಟ್‍ಗಳಾಗಿದ್ದು, ಅಕ್ಟೋಬರ್ ತಿಂಗಳಲ್ಲಿ ವಿವಿಧ ಮೂಲಗಳಿಂದ 6035ಮೆ.ವಾ ವಿದ್ಯುತ್ ರಾಜ್ಯಕ್ಕೆ ಲಭ್ಯವಾಗಿದೆ. 2015-16ನೇ ಸಾಲಿನಲ್ಲಿ ರಾಜ್ಯದಲ್ಲಿ ಒಟ್ಟು 50821 ದಶಲಕ್ಷ ಯೂನಿಟ್ ವಿದ್ಯುತ್ ಬಳಕೆ ಮಾಡಲಾಗಿದೆ. ರಾಜ್ಯದ ರೈತರು ಸೇರಿದಂತೆ ಎಲ್ಲರ ಹಿತಕಾಪಾಡಲು ಸರ್ಕಾರ ಬದ್ಧವಾಗಿದ್ದು, ಸಮರ್ಪಕವಾಗಿ ವಿದ್ಯುತ್ ಪೂರೈಕೆ ಮಾಡಲು ಗರಿಷ್ಟ ಪ್ರಯತ್ನ ಮಾಡಲಾಗುತ್ತಿದೆ ಎಂದರು.
ವಿದ್ಯುತ್ ಸೋರಿಕೆ ಪ್ರಮಾಣ ಕಡಿಮೆ ಮಾಡಲು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗಿದೆ. ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ 2015-16ನೇ ಸಾಲಿನಲ್ಲಿ ಒಟ್ಟಾರೆಯಾಗಿ ಶೇ.3.5ರಷ್ಟು ವಿತರಣಾ ನಷ್ಟ ಅನುಭವಿಸಿದೆ. ಕಳೆದ ವರ್ಷ ಬೆಸ್ಕಾಂ ಶೇ.12, ಮೆಸ್ಕಾಂ ಶೇ.11.50, ಸೆಸ್ಕ್ ಶೇ.13.60, ಹೆಸ್ಕಾಂ ಶೇ.16.89 ಮತ್ತು ಜೆಸ್ಕಾಂ ಶೇ.18.18ರಷ್ಟು ವಿತರಣಾ ನಷ್ಟ ಅನುಭವಿಸಿದೆ. ಹೊಸ ವಿದ್ಯುತ್ ಉಪಕೇಂದ್ರ/ಪ್ರಸರಣಾ ಮಾರ್ಗಗಳ ಸ್ಥಾಪನೆ, ಸಾಮಥ್ರ್ಯ ಹೆಚ್ಚಳ, ಹೆಚ್ಚುವರಿ ಪರಿವರ್ತಕಗಳ ಅಳವಡಿಕೆ, ವಿತರಣಾ ಪರಿವರ್ತಕಗಳಿಗೆ ಮೀಟರ್ ಅಳವಡಿಕೆ ಇತ್ಯಾದಿ ಸುಧಾರಣಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಅವರು ಹೇಳಿದರು.
ವಿದ್ಯುತ್ ಕೊರತೆ ನೀಗಿಸಲು ಹಲವಾರು ಕ್ರಮಗಳನ್ನು ಕೈಗೊಳ್ಳಲಾಗಿದೆ.
ದೀರ್ಘಾವಧಿ ಆಧಾರದಲ್ಲಿ ದಾಮೋದರ್ ವ್ಯಾಲಿ ಕಾರ್ಪೊರೇಶನ್‍ನಿಂದ 450ಮೆ.ವಾ ವಿದ್ಯುತ್ ಖರೀದಿಸಲಾಗುತ್ತಿದೆ. ಅಲ್ಪಾವಧಿ ಆಧಾರದಲ್ಲಿ 900ಮೆ.ವಾ ಖರೀದಿಸಲು ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಲಾಗಿದೆ. ಮುಂದಿನ ಮೇ ತಿಂಗಳವರೆಗೆ ಮಹಾರಾಷ್ಟ್ರದಿಂದ 300ಮೆ.ವಾ ವಿದ್ಯುತ್ ಖರೀದಿಸಲು ಒಪ್ಪಂದ ಮಾಡಲಾಗಿದೆ. ಡಿಸೆಂಬರ್ 15ರಿಂದ ಮುಂದಿನ ಮೇ ತಿಂಗಳವರೆಗೆ 1200ಮೆ.ವಾ ವಿದ್ಯುತ್ ಖರೀದಿಸಲು ಪ್ರಸ್ತಾಪಿಸಿ, ಕೆ.ಇ.ಆರ್.ಸಿ ಅನುಮೋದನೆ ಕೋರಲಾಗಿದೆ. ರಾಜ್ಯದ ಬರಪರಿಸ್ಥಿತಿ ಹಿನ್ನೆಲೆಯಲ್ಲಿ ಕೇಂದ್ರ ಇಂಧನ ಸಚಿವಾಲಯ ನವೆಂಬರ್ 6ರಿಂದ 200ಮೆ.ವಾ ಹೆಚ್ಚುವರಿ ವಿದ್ಯುತ್ ಕೇಂದ್ರೀಯ ಉತ್ಪಾದನಾ ಘಟಕಗಳಿಂದ ರಾಜ್ಯಕ್ಕೆ ಹಂಚಿಕೆ ಮಾಡಿದೆ ಎಂದು ಉತ್ತರದಲ್ಲಿ ತಿಳಿಸಿದ್ದಾರೆ.