ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ‌ ನೀಡುವ ಅವಶ್ಯಕತೆಯಿಲ್ಲ: ಪರಮೇಶ್ವರ

Sampriya

ಬುಧವಾರ, 25 ಸೆಪ್ಟಂಬರ್ 2024 (13:56 IST)
ಬೆಂಗಳೂರು: ಕಾನೂನು ಹೋರಾಟ ಮಾಡಲು ಅವಕಾಶ ಇರುವುದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಯ ರಾಜೀನಾಮೆ ನೀಡುವ ಅವಶ್ಯಕತೆ ಇಲ್ಲ ಎಂದು ಗೃಹ ಸಚಿವ ಜಿ. ಪರಮೇಶ್ವರ ಹೇಳಿದರು.

ಮುಖ್ಯಮಂತ್ರಿಯವರು ಯಾವುದೇ ಕಡತಕ್ಕೆ ಸಹಿ ಹಾಕಿಲ್ಲ.  ಮುಡಾ‌ ನಿವೇಶನ ಹಂಚಿಕೆ ಪ್ರಕರಣದಲ್ಲಿ ಮುಖ್ಯಮಂತ್ರಿಯವರ ಪಾತ್ರ ಏನೂ ಇಲ್ಲ. ಅಧಿಕಾರ ದುರ್ಬಳಕೆ ಆಗಿಲ್ಲ ಎಂದು ನ್ಯಾಯಕ್ಕಾಗಿ ಹೈಕೋರ್ಟ್‌ಗೆ ಹೋಗಿದ್ದೆವು. ಅದಕ್ಕೆ ವಿರುದ್ಧವಾದ ತೀರ್ಪು ಬಂದಿದೆ. ತೀರ್ಪನ್ನು ಗೌರವಿಸುತ್ತೇವೆ ಎಂದು ಹೇಳಿದರು.

 ಆದರೆ, ಎಲ್ಲೋ ಒಂದು ಕಡೆ ನಮಗೆ ನ್ಯಾಯ ಸಿಗಲಿಲ್ಲವೇನು ಅನ್ನಿಸುತ್ತಿದೆ. ಮುಂದಿ‌ನ ಕಾನೂನು ಹೋರಾಟದ ಬಗ್ಗೆ ಮುಖ್ಯಮಂತ್ರಿಯವರು ಈಗಾಗಲೇ ಸ್ಪಷ್ಟಪಡಿಸಿದ್ದಾರೆ ಎಂದರು.

ಮುಖ್ಯಮಂತ್ರಿಯವರು ರಾಜೀನಾಮೆ ಕೊಡಬೇಕು. ಅಧಿಕಾರ ಬಿಟ್ಟು ಇಳಿಯಬೇಕು ಎನ್ನುವ ಮಾತುಗಳು ವಿಪಕ್ಷದವರಿಂದ ಕೇಳಿಬರುತ್ತಿದೆ. ಇದ್ಯಾವುದು ಕೂಡ ಆಗುವುದಿಲ್ಲ. ಸಿದ್ದರಾಮಯ್ಯ ಅವರು ರಾಜೀನಾಮೆ ಕೊಡುವ ಅಗತ್ಯವಿಲ್ಲ ಎಂದು ಅನೇಕರು ಸ್ಪಷ್ಟಪಡಿಸಿದ್ದಾರೆ.  

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತಮ್ಮ 40 ವರ್ಷಗಳ ರಾಜಕೀಯ ಜೀವನದಲ್ಲಿ ಯಾವುದೇ ರೀತಿಯ ಆಪಾದನೆಗಳು ಬಂದಿಲ್ಲ. ಈಗ ರಾಜಕೀಯ ದುರುದ್ದೇಶದಿಂದ ಆರೋಪಗಳನ್ನು ಮಾಡಿದ್ದಾರೆ. ಎಂಥವರಿಗೂ ಇಂತಹ ಆಪಾದನೆ ಮಾಡಿದ್ದಾರೆ ಎಂದಾದಾಗ ನೋವಾಗುವುದು ಸಹಜ. ಇದಕ್ಕೆ ಹೋರಾಟ ಮಾಡಬೇಕಲ್ಲವೇ. ವಿಪಕ್ಷದವರು ರಾಜಕೀಯ ದುರುದ್ದೇಶದಿಂದ ಮಾಡಿರುವ ಆರೋಪವನ್ನು ಜನಸಮುದಾಯಕ್ಕೆ ತೋರಿಸುತ್ತೇವೆ ಎಂದು ಹೇಳಿದರು‌.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ