ಇಲಾಖೆಗಳ ಕಾರ್ಯನಿರ್ವಹಣೆಗೆ ಶ್ರೇಯಾಂಕ ನೀಡಲು ಮಾನದಂಡ ನಿಗದಿಗೆ ಸೂಚನೆ

ಮಂಗಳವಾರ, 11 ಜನವರಿ 2022 (19:35 IST)
ಬೆಂಗಳೂರು: ಪ್ರತಿ ವರ್ಷ ಎಲ್ಲಾ ಇಲಾಖೆಗಳ ಕಾರ್ಯನಿರ್ವಹಣೆಯ ಬಗ್ಗೆ ಶ್ರೇಯಾಂಕವನ್ನು ನಿಗದಿಪಡಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚಿಸಿದ್ದಾರೆ.
ಆಡಳಿತ ಸುಧಾರಣೆಯ ಕುರಿತು ಇಂದು ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ನಿರ್ಧಾರ ಕೈಗೊಳ್ಳುವ ಹಂತಗಳು ಕಡಿಮೆ ಆಗಿ ವಿಳಂಬವಿಲ್ಲದೆ, ಜನರಿಗೆ ಸುಲಭವಾಗಿ ಸೌಲಭ್ಯಗಳು ದೊರಕುವಂತಾಗಬೇಕು. ಜನರ ಅರ್ಜಿಗಳಿಗೆ ಕೆಲವೇ ತಾಸುಗಳಲ್ಲಿ ಉತ್ತರಿಸುವಂತಿರಬೇಕು. ಅತ್ಯಂತ ಕೆಳಮಟ್ಟದಲ್ಲಿ ಹಾಗೂ ಮೇಲ್ಮಟ್ಟದಲ್ಲಿ ಜವಾಬ್ದಾರಿಗಳನ್ನು ನಿಗದಿಪಡಿಸಬೇಕು. ಕಂದಾಯ ಇಲಾಖೆಯ ಕೆಲವು ಹೊಣೆಯನ್ನು ಗ್ರಾಮ ಪಂಚಾಯತ್ ಗಳಿಗೆ ವಹಿಸಬೇಕು ಎಂದು ನಿರ್ದೇಶನ ನೀಡಿದರು.
ಜಂಟಿ ಕಾರ್ಯದರ್ಶಿಗಳು ಹಾಗೂ ಉಪ ಕಾರ್ಯದರ್ಶಿಗಳನ್ನು ಸಬಲಗೊಳಿಸಬೇಕು. ಪ್ರಾದೇಶಿಕ ಆಯುಕ್ತರಿಗೆ ಬೃಹತ್ ನೀರಾವರಿ, ಭೂ ಸ್ವಾಧೀನ ಮುಂತಾದ ವಿಷಯಗಳನ್ನು ನಿರ್ವಹಿಸಬೇಕು. ಕಂದಾಯ ಇಲಾಖೆಯ ಸುಧಾರಣೆಯಾದರೆ ಶೇ. 40ರಷ್ಟು ಸರಕಾರಿ ಕೆಲಸ ಕಡಿಮೆಯಾದಂತಾಗುತ್ತದೆ ಎಂದು ಸಿಎಂ ಬೊಮ್ಮಾಯಿ ಅಭಿಪ್ರಾಯಪಟ್ಟರು.
ನೀರಾವರಿ, ಲೋಕೋಪಯೋಗಿ ಮುಂತಾದ ಅಭಿವೃದ್ಧಿ ಯೋಜನೆಗಳು ಕಾಲಮಿತಿಯೊಳಗೆ ಪೂರ್ಣಗೊಳ್ಳಬೇಕು. ನಿಗದಿತ ಸಮಯದಲ್ಲಿ ಪೂರ್ಣಗೊಳ್ಳದ ಯೋಜನೆಗಳಿಂದ ರಾಜ್ಯಕ್ಕೆ ಅತಿ ಹೆಚ್ಚಿನ ನಷ್ಟ ಉಂಟಾಗುತ್ತಿದೆ ಎಂದರು.
ಕಾಯ್ದೆಗಳಲ್ಲಿ ಬದಲಾವಣೆ, ಪುನಾರಾವರ್ತಿತ ಕಾಯ್ದೆಗಳನ್ನು ಗುರುತಿಸುವ ಕೆಲಸವೂ ಆಗಬೇಕೆಂದು ಮುಖ್ಯಮಂತ್ರಿಗಳು. ಸರ್ಕಾರದಿಂದ ವಿವಿಧ ಯೋಜನೆಗಳಿಗೆ ಬಿಡುಗಡೆಯಾದರೂ ಬಳಕೆಯಾಗದ ಮೊತ್ತ ಬ್ಯಾಂಕ್ ಖಾತೆಗಳಲ್ಲಿ ಉಳಿದುಕೊಂಡಿದ್ದು, ಈ ಮೊತ್ತವನ್ನು ಕ್ಲಿಯರ್ ಮಾಡಲು ಕ್ರಮ ಕೈಗೊಳ್ಳಲು ಪ್ರಾರಂಭಿಸಲಾಗಿದೆ.
ಸಭೆಯಲ್ಲಿ ಸಚಿವರಾದ ಡಾ. ಕೆ.ಸುಧಾಕರ್, ಬಿ.ಎ. ಬಸವರಾಜ, ಅಭಿವೃದ್ಧಿ ಆಯುಕ್ತರು ಹಾಗೂ ಸರಕಾರದ ಅಪರ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ, ಸರಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ಹಾಗೂ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಟಿ.ಎಂ. ವಿಜಯಭಾಸ್ಕರ್ , ಯೋಜನಾ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್, ಡಿ.ಪಿ.ಎ.ಆರ್ ಕಾರ್ಯದರ್ಶಿ ಹೇಮಲತಾ, ಆಡಳಿತ ಸುಧಾರಣೆ ಕಾರ್ಯದರ್ಶಿ ಮನೀಶ್ ಮೌದ್ಗಿಲ್ ಮೊದಲಾದವರು ಇದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ