ಉಜಿರೆ: ಮಹೇಶ್ ಶೆಟ್ಟಿ ತಿಮರೋಡಿಯವರನ್ನು ಬ್ರಹ್ಮಾವರ ಪೊಲೀಸರು ವಿಚಾರಣೆಗೆಂದು ವಶಕ್ಕೆ ಪಡೆಯಲು ಬಂದ ವೇಳೆ ಎಸ್ಪಿ ಅವರ ಕಾರಿಗೆ ಡಿಕ್ಕಿ ಹೊಡೆದು ಅಡ್ಡಿ ಬಂದ ಆರೋಪದಲ್ಲಿ ವಶದಲ್ಲಿದ್ದ ಮೂವರಿಗೆ ಜಾಮೀನು ಸಿಕ್ಕಿದೆ.
ಕಾರ್ಕಳದ ಹೊಸ್ಮಾರಿನಲ್ಲಿ ಅಡಿಷನಲ್ ಎಸ್ಪಿ ಅವರ ವಾಹನಕ್ಕೆ ತಿಮರೋಡಿ ಅವರ ಬೆಂಬಲಿಗರ ಕಾರು ಢಿಕ್ಕಿ ಹೊಡೆದ ಪ್ರಕರಣ ಸಂಬಂಧಿಸಿದಂತೆ ಸೃಜನ್, ಹಿತೇಶ್ ಶೆಟ್ಟಿ, ಸುಜಿತ್ ಮಡಿವಾಳ ಅವರಿಗೆ ಉಡುಪಿ ನ್ಯಾಯಾಲಯ ಆ.28ರಂದು ಜಾಮೀನು ಮಂಜೂರು ಮಾಡಿದೆ.
ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದಲ್ಲಿ ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧ ರಾಜೀವ್ ಕುಲಾಲ್ ನೀಡಿದ ದೂರಿನಂತೆ ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದಡಿಯಲ್ಲಿ ಬ್ರಹ್ಮಾವರ ಪೊಲೀಸರು ತಿಮರೋಡಿಯವರನ್ನು ವಶಕ್ಕೆ ಪಡೆದಿದ್ದರು.
ಈ ವೇಳೆ ಅವರ ಹಿಂದೆ ಬರುತ್ತಿದ್ದ ತಿಮರೋಡಿ ಬೆಂಬಲಿಗರ ಕಾರು ಪೊಲೀಸ್ ವಾಹನಕ್ಕೆ ಗುದ್ದಿ ಕರ್ತವ್ಯಕ್ಕೆ ಅಡ್ಡಿ ಪಡಿಸಲಾಗಿದೆ ಎಂದು ಆರೋಪಿಸಲಾಗಿತ್ತು.
ಪ್ರಕರಣದಲ್ಲಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಸೃಜನ್, ಹಿತೇಶ್ ಶೆಟ್ಟಿ, ಸುಜಿತ್ ಮಡಿವಾಳ ಅವರನ್ನು ಕಾರ್ಕಳ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದು ನ್ಯಾಯಾಲಯ ಆರೋಪಿಗಳಿಗೆ 14 ದಿನಗಳ ನಾಯಾಂಗ ಬಂಧನ ವಿಧಿಸಿತ್ತು.
ಆ.28ರಂದು ಉಡುಪಿ ನ್ಯಾಯಾಲಯದಿಂದ ಮೂವರಿಗೂ ಜಾಮೀನು ಮಂಜೂರು ಮಾಡಲಾಗಿದ್ದು, ಜೈಲಿನಿಂದ ಬಿಡುಗಡೆ ಮಾಡಿದ್ದಾರೆ.