ಕಪಾಳಕ್ಕೆ ಬಾರಿಸಿದರೆ ಹಲ್ಲುದುರುತ್ತದೆ: ಅಧಿಕಾರಿಗೆ ಶಾಸಕ

ಶನಿವಾರ, 30 ಜುಲೈ 2016 (08:38 IST)
'ಕಪಾಳಕ್ಕೆ ಬಾರಿಸಿದರೆ ಹಲ್ಲುದುರುತ್ತದೆ', ಅರಣ್ಯ ಇಲಾಖೆ ಅಧಿಕಾರಿಗಳೊಬ್ಬರಿಗೆ ಶಾಸಕ ಸತೀಶ್ ರೆಡ್ಡಿ ತರಾಟೆ ತೆಗೆದುಕೊಂಡ ರೀತಿ ಇದು.

ಅಬ್ಬರಿಸುತ್ತಿರುವ ಮಳೆಯಿಂದಾಗಿ  ಜಲಾವೃತವಾಗಿರುವ ಕೋಡಿಚಿಕ್ಕನಹಳ್ಳಿ, ಪುಟ್ಟೆಗನಹಳ್ಳಿಯಲ್ಲಿ ಶಾಸಕರು ನಿನ್ನೆ ಮುಂಜಾನೆಯಿಂದಲೇ ಪರಿವೀಕ್ಷಣೆಯಲ್ಲಿ ತೊಡಗಿದ್ದರು. ಆದರೆ ಅರಣ್ಯ ಇಲಾಖೆಯಿಂದ ಯಾರೊಬ್ಬರು ಅಲ್ಲಿಗೆ ಭೇಟಿ ನೀಡದೆ ಬೇಜವಾಬ್ದಾರಿ ತೋರಿಸಿದ್ದಾರೆ.ಅಷ್ಟೊಂದು ಸಮಸ್ಯೆಯಾದರೂ ಪತ್ತೆಯೇ ಇಲ್ಲದ ಅಧಿಕಾರಿಗಳು ಸಂಜೆಹೊತ್ತಿಗೆ ಆಗಮಿಸಿದಾಗ ಶಾಸಕರ ಕೋಪ ನೆತ್ತಿಗೇರಿದೆ. ಸ್ಥಳಕ್ಕಾಗಮಿಸಿದ ಅರಣ್ಯಾಧಿಕಾರಿಗಳಾದ ಡಿಸಿಎಫ್ ದೀಪಿಕಾ ಮತ್ತು ಅಧಿಕಾರಿ ಹರ್ಷವರ್ಧನ್ ವಿರುದ್ಧ ಜನರು ಧಿಕ್ಕಾರ ಕೂಗಲು ಆರಂಭಿಸಿದರು. ಎಲ್ಲ ಮುಗಿದು ಹೋದ ಮೇಲೆ ಬಂದೇನು ಪ್ರಯೋಜನ ಎಂದು ಪ್ರಶ್ನಿಸಿದರು.

ಜನರ ಆಕ್ರೋಶಕ್ಕೆ ಸಾಥ್ ನೀಡಿದ ಶಾಸಕರು ನಾನು ಹಲವು ಬಾರಿ ಕಾಲ್ ಮಾಡಿದ್ದೇನೆ. ಯಾಕೆ ಕಾಲ್ ರಿಸಿವ್ ಮಾಡಿಲ್ಲ. ಕೆನ್ನೆಗೆ ಬಾರಿಸಿದರೆ ಹಲ್ಲು ಉದುರುತ್ತದೆ, ಎಂದು ಅರಣ್ಯ ಇಲಾಖೆ ಅಧಿಕಾರಿ ಹರ್ಷವರ್ಧನ್ ಅವರನ್ನು ತರಾಟೆಗೆ ತೆಗೆದುಕೊಂಡರು.

ತಾವಾಡಿದ ಒರಟು ಮಾತುಗಳನ್ನು ಸಮರ್ಥಿಸಿಕೊಂಡ ಶಾಸಕರು 350ಕ್ಕಿಂತ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ. ಕರೆ ಮಾಡಿದರೆ ಅರಣ್ಯ ಇಲಾಖೆಯಲ್ಲಿ ಯಾರೂ ಪ್ರತಿಕ್ರಿಯಿಸುವುದಿಲ್ಲ. ಬಿಸಿ ಮುಟ್ಟಿಸದಿದ್ದರೆ ಅವರು ಕೆಲಸವನ್ನು ಸರಿಯಾಗಿ ಮಾಡುವುದಿಲ್ಲ. ಜನರಿಂದ ನಾವು ಕಪಾಳಕ್ಕೆ ಹೊಡೆಸಿಕೊಳ್ಳಬೇಕಾಗುತ್ತದೆ. ಇಲಾಖೆಯ ಅಡಿಯಲ್ಲಿ ಬರುವ ಕೆರೆಯ ಹೂಳನ್ನು ತೆಗೆದಿಲ್ಲ. ಹೀಗಾಗಿ ಇಷ್ಟೊಂದು ಸಮಸ್ಯೆ ಉದ್ಭವಿಸಿದೆ. ನಾನು ಸುಖಾಸುಮ್ಮನೆ ಬೈದಿಲ್ಲ ಎಂದು ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ