ಕೊಪ್ಪಳ : ರಾಜ್ಯದಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷ ನೆಲ ಕಚ್ಚಲು ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಕಾರಣ ಎಂದು ಶಾಸಕ ಗಾಲಿ ಜನಾರ್ದನ ರೆಡ್ಡಿ ಹೇಳಿದರು.
ಕೊಪ್ಪಳದ ಗಂಗಾವತಿ ನಗರದ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಕಚೇರಿಯಲ್ಲಿ ಇಂದು ಬಳ್ಳಾರಿ ವಿಧಾನಸಭಾ ಕ್ಷೇತ್ರದ ಬೂತ್ ಮಟ್ಟದ ಪದಾಧಿಕಾರಿಗಳು ಹಾಗೂ ಪ್ರಮುಖ ಮುಖಂಡರ ಆತ್ಮಾವಲೋಕನ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಪಕ್ಷ ಸ್ಥಾಪನೆಗೂ ಮುಂಚೆ ನನ್ನನ್ನು ಪಕ್ಷಕ್ಕೆ ಬರಮಾಡಿಕೊಳ್ಳಿ ಎಂದು ಬಿಜೆಪಿ ಪಕ್ಷದ ಮುಖಂಡರ ಮನೆ ಬಾಗಿಲಿಗೆ ಹೋಗಿಲ್ಲ.
ಅಮಿತ್ ಶಾ, ನರೇಂದ್ರ ಮೋದಿಯವರ ಬಳಿಯೂ ಹೋಗಿಲ್ಲ. ಎಷ್ಟೋ ಬಾರಿ ಅಮಿತ್ ಶಾ ಅವರು ನನ್ನನ್ನು ಸಂಪರ್ಕಿಸಲು ಪ್ರಯತ್ನಿಸಿದರು. ನಾನು ಅವರಿಗೆ ಸಿಕ್ಕಿಲ್ಲ. ಬಿಜೆಪಿ ಪಕ್ಷವನ್ನು ನಾನೇ ದೂರ ಇಟ್ಟೆ ಎಂದು ಮಾರ್ಮಿಕವಾಗಿ ನುಡಿದರು.
ಬಳ್ಳಾರಿ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಅಭ್ಯರ್ಥಿ ಲಕ್ಷ್ಮೀ ಅರುಣಾ ಅವರು ಎರಡನೇ ಸ್ಥಾನದಲ್ಲಿ ಬಂದಿದ್ದಾರೆ. ಕೇವಲ ನೂರು ದಿನಗಳಲ್ಲಿ ಪಕ್ಷದ ಅಭ್ಯರ್ಥಿ ಲಕ್ಷ್ಮೀ ಅರುಣಾ ಅವರು ಕ್ಷೇತ್ರದ ಹೆಚ್ಚಿನ ಜನರ ಮನಸ್ಸು ಮುಟ್ಟುವಲ್ಲಿ ಯಶಸ್ವಿಯಾಗಿದ್ದಾರೆ ಎಂದರು.