ರಾಜ್ಯ ಸರಕಾರ ವಿರುದ್ಧ ಮಂಡ್ಯ ರೈತರ ಆಕ್ರೋಶ

ಶನಿವಾರ, 2 ಫೆಬ್ರವರಿ 2019 (16:23 IST)
ಭತ್ತ ಖರೀದಿಸಲು ಸರ್ಕಾರದ ಬಳಿ ಹಣ ಇಲ್ಲವಾ? ಎನ್ನುವ ಅನುಮಾನ ಈಗ ರೈತರನ್ನ ಕಾಡತೊಡಗಿದೆ.
ಸಾಲಮನ್ನಾ ಭರವಸೆ ರೀತಿಯಲ್ಲಿಯೇ ಭತ್ತ ಖರೀದಿ ಕೇಂದ್ರದ ಸ್ಥಿತಿಯಾಗುತ್ತಿದೆ. ಭತ್ತಕ್ಕೆ ಬೆಂಬಲ ಬೆಲೆ ಘೋಷಣೆ ಕೂಡ ಬರೀ ನಾಟಕ ಎಂದು ಮಂಡ್ಯ ರೈತರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. 

ಭತ್ತ ಖರೀದಿ ಕೇಂದ್ರ, ಭತ್ತಕ್ಕೆ ಬೆಂಬಲ ಬೆಲೆ ಎಲ್ಲ ಸರ್ಕಾರ ರೈತರ ಕಣ್ಣೊರೆಸಲು ಆಡುತ್ತಿರುವ ನಾಟಕವಾಗಿದೆಯಾ?‌ ಎಂದು ಸಕ್ಕರೆ ನಾಡಿನ ರೈತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಮಂಡ್ಯದ ಮದ್ದೂರಿನ ತಾಲ್ಲೂಕು ಕಚೇರಿಯಲ್ಲಿ ರೈತರು ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದರು. ಪ್ರತಿ ದಿನ ನಿಮ್ಮ‌ ಭತ್ತ ಖರೀದಿಸುತ್ತೇವೆ ಎಂದು ಹೇಳಿ ಅಧಿಕಾರಿಗಳು ಭರವಸೆ ನೀಡುತ್ತಿದ್ದಾರೆ. ಅವರ ಮಾತು ನಂಬಿಕೊಂಡು ವಾಹನಗಳಲ್ಲಿ ಭತ್ತ ತುಂಬಿಕೊಂಡು ಮದ್ದೂರು ಪಟ್ಟಣಕ್ಕೆ ಬರುತ್ತಿದ್ದೇವೆ. ಆದರೆ ನಮ್ಮ‌ ಭತ್ತ ಖರೀದಿ ಮಾಡದೆ ಅಧಿಕಾರಿಗಳು ವಾಪಸ್ ಕಳುಹಿಸುತ್ತಿದ್ದಾರೆ. ಇದೆಲ್ಲವನ್ನು ನೋಡಿದರೆ ಭತ್ತ ಖರೀದಿಸಲು ಸರ್ಕಾರದ ಬಳಿ ಹಣ ಇಲ್ಲವಾ? ಎಂಬ ಅನುಮಾನ ಮೂಡುತ್ತಿದೆ ಎಂದು ರೈತರು  ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಭತ್ತ ಖರೀದಿಸಲು ಹಣವಿಲ್ಲದಿದ್ದರೆ ಅದನ್ನಾದರೂ ನೇರವಾಗಿ ಒಪ್ಪಿಕೊಳ್ಳಿ. ಅದು ಬಿಟ್ಟು ಪ್ರತಿ ದಿನ ಭತ್ತ ಖರೀದಿಸುತ್ತೇವೆ ಎಂದು ಸುಳ್ಳು ಹೇಳಿ ರೈತರ ಜೀವನದ ಜೊತೆ ಚೆಲ್ಲಾಟವಾಡಬೇಡಿ ಎಂದು ಭತ್ತವನ್ನು ವಾಹನಗಳಲ್ಲಿ ತಾಲ್ಲೂಕು ಕಚೇರಿಗೆ ತುಂಬಿಕೊಂಡು ಬಂದು ರೈತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ