ಸ್ವಂತ ಮನೆ ಪಾಲಿಟಿಕ್ಸ್ ಶುರು!

ಮಂಗಳವಾರ, 5 ಮಾರ್ಚ್ 2019 (15:05 IST)
ಲೋಕಸಭೆ ಚುನಾವಣೆಗೂ ಮೊದಲೇ ಆ ಕ್ಷೇತ್ರದಲ್ಲಿ ಸ್ವಂತ ಮನೆ ಪಾಲಿಟಿಕ್ಸ್ ಜೋರಾಗುತ್ತಿದೆ.
ಮಂಡ್ಯದಲ್ಲಿ ಸ್ವಂತ ಮನೆ ಪಾಲಿಟಿಕ್ಸ್ ಶುರುವಾಗಿದೆ. ಮಂಡ್ಯದಲ್ಲಿ ಐದು ಎಕರೆ ಕೃಷಿ ಜಮೀನು ಖರೀದಿಸಿ, ಸ್ವಂತ ಮನೆ ನಿರ್ಮಾಣಕ್ಕೆ ನಿಖಿಲ್ ಕುಮಾರಸ್ವಾಮಿ ಮುಂದಾಗಿದ್ದಾರೆ.

ಮಂಡ್ಯ ಲೋಕಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಆಗಿರುವ ನಿಖಿಲ್ ಕುಮಾರಸ್ವಾಮಿ, ಸ್ವಂತ ಮನೆ ನಿರ್ಮಿಸಬೇಕೆಂದು ಮೊನ್ನೆ ನಡೆದ ಖಾಸಗಿ ಕಾರ್ಯಕ್ರಮದಲ್ಲಿ ಇಚ್ಛೆ ವ್ಯಕ್ತಪಡಿಸಿದ್ದರು. ಮಂಡ್ಯದಲ್ಲೇ ನೆಲೆಸಿ ನಿಮ್ಮ ಕಷ್ಟಗಳಿಗೆ ಧ್ವನಿಯಾಗುತ್ತೇನೆ ಎಂಬ ಸಂದೇಶ ಜಿಲ್ಲೆಯ ಜನರಿಗೆ ರವಾನಿಸಲು ಜಮೀನು ಖರೀದಿಗೆ ಮುಂದಾಗಿದ್ದಾರೆ.

ಮಂಡ್ಯ ನಗರಕ್ಕೆ ಸಮೀಪ ಐದು ಎಕರೆ ಕೃಷಿ ಜಮೀನು ನೋಡಲು ಜಿಲ್ಲೆಯ ಜೆಡಿಎಸ್ ಮುಖಂಡರಿಗೆ ತಿಳಿಸಿರುವ ನಿಖಿಲ್ ಸೂಚನೆಯಂತೆ ಈಗಾಗಲೇ ಜಮೀನು ಹುಡುಕಾಟದಲ್ಲಿ ಜೆಡಿಎಸ್ ಮುಖಂಡರು ತೊಡಗಿದ್ದಾರೆ.
ಕಾರ್ಯಕರ್ತರು ಮುಖಂಡರ ಜೊತೆ ಚರ್ಚಿಸಲು ವಿಶಾಲವಾದ ಜಾಗ ಇರುವ ಮನೆಯ ಜೊತೆಗೆ, ವಾಸ್ತು ಪ್ರಕಾರದ ಮನೆಯನ್ನೇ ಹುಡುಕುತ್ತಿರುವ ನಿಖಿಲ್ ಚುನಾವಣೆಗೂ ಮುನ್ನವೇ ಭಾರಿ ಲೆಕ್ಕಾಚಾರದೊಂದಿಗೆ ಕಣಕ್ಕೆ ಇಳಿಯುತ್ತಿದ್ದಾರೆ.
ಐದು ಎಕರೆ ಜಮೀನು ಖರೀದಿಸಿ ಅಲ್ಲಿಯೂ ತೋಟದ ಮನೆ ನಿರ್ಮಿಸಲು ಈಗಾಗಲೇ ಪ್ಲಾನ್ ಸಿದ್ಧಪಡಿಸಿದ್ದಾರೆ. ರಾಜಕೀಯ, ಸಿನೆಮಾ ಜೊತೆಗೆ ಕೃಷಿಯಲ್ಲೂ ತೊಡಗಿಸಿಕೊಳ್ಳಲು ನಿಖಿಲ್ ಚಿಂತನೆ ನಡೆಸಿದ್ದಾರೆ.

ಮಂಡ್ಯದಲ್ಲಿ ಸ್ವಂತ ಜಮೀನು, ಮನೆ ಮಾಡದಿದ್ರೆ ಚುನಾವಣೆ ನಂತರ ನಿಖಿಲ್ ಮಂಡ್ಯಕ್ಕೆ ಬರಲ್ಲ ಎಂಬ ತಪ್ಪು ಸಂದೇಶ ರವಾನೆಯಾಗುತ್ತೆ. ಇದು ಮತಗಳಿಕೆ ಮೇಲೆ ಕೆಟ್ಟ ಪರಿಣಾಮ ಬೀರುತ್ತೆ ಎಂಬ ಯೋಚನೆಯಲ್ಲಿರುವಂತಿದೆ. ಹೀಗಾಗಿ ಸ್ವಂತ ಕೃಷಿ ಜಮೀನು, ಮನೆ ನಿರ್ಮಿಸಿ ಮಂಡ್ಯ ಜನರನ್ನು ಭಾವನಾತ್ಮಕವಾಗಿ ಸೆಳೆಯಲು ನಿಖಿಲ್ ಮಾಸ್ಟರ್ ಪ್ಲಾನ್ ರೂಪಿಸಿದ್ದಾರೆ ಎನ್ನಲಾಗಿದೆ. ನಿಖಿಲ್‌ಗೆ ಎದುರಾಳಿಯಾಗಿ ಸುಮಲತಾ ಅಂಬರೀಷ್ ಸ್ಪರ್ಧೆ ಮಾಡೋದು ಖಚಿತವಾಗಿದೆ.  

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ