ಪ್ರಧಾನಿ ಮೋದಿಗೆ ನನ್ನ ಕಂಡ್ರೆ ಭಯ: ಸಿಎಂ ಸಿದ್ದರಾಮಯ್ಯ

ಮಂಗಳವಾರ, 31 ಅಕ್ಟೋಬರ್ 2017 (12:04 IST)
ಪ್ರಧಾನಿ ನರೇಂದ್ರ ಮೋದಿಯವರಿಗೆ ನನ್ನ ಕಂಡ್ರೆ ಭಯ. ಆದ್ದರಿಂದಲೇ ಕರ್ನಾಟಕಕ್ಕೆ ಬಂದಾಗಲೆಲ್ಲಾ ನನ್ನ ವಿರುದ್ಧ ವಾಗ್ದಾಳಿ ನಡೆಸುತ್ತಾರೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಕಾಂಗ್ರೆಸ್ ಸರಕಾರದ ಸಾಧನೆಗಳನ್ನು ಕಂಡು ಮೋದಿಗೆ ಹೊಟ್ಟೆಯೂರಿ. ಆದ್ದರಿಂದ ನನ್ನ ಕಾಲೆಳೆಯಲು ಪ್ರಯತ್ನಿಸುತ್ತಿದ್ದಾರೆ. ಪ್ರತಿ ಬಾರಿ ಕರ್ನಾಟಕಕ್ಕೆ ಬಂದಾಗ ನನ್ನ ವಿರುದ್ಧ ಕಿಡಿಕಾರುತ್ತಾರೆ. ಇದನ್ನು ನೋಡಿದ್ರೆ ಅವರಿಗೆ ನನ್ನ ಬಗ್ಗೆ ಭಯವಿದೆ ಎಂದನಿಸುತ್ತದೆ ಎಂದು ಲೇವಡಿ ಮಾಡಿದ್ದಾರೆ. 
 
ಕಾಂಗ್ರೆಸ್ ಸರಕಾರದ ದುರಾಡಳಿತದ ವಿರುದ್ಧ ಜನತೆ ಬೇಸತ್ತಿದ್ದಾರೆ ಎನ್ನುವ ಪ್ರಧಾನಿ ಮೋದಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಯಾರು ಇರಬೇಕು ಯಾರು ಹೋಗಬೇಕು ಎನ್ನುವುದನ್ನು ಜನತೆ ನಿರ್ಧರಿಸುತ್ತಾರೆ. ನಂಜನಗೂಡು ಉಪಚುನಾವಣೆಯಲ್ಲಿ ಜನತೆ ಕಾಂಗ್ರೆಸ್ ಪಕ್ಷಕ್ಕೆ ಮತಹಾಕಿದ್ದಾರೆ ಎನ್ನುವುದು ಮರೆಯಬೇಡಿ ಎಂದು ತಿರುಗೇಟು ನೀಡಿದ್ದಾರೆ. 
 
ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಒಂದಾಗಿ ನನ್ನನ್ನು ಸೋಲಿಸಲು ರಣತಂತ್ರ ರೂಪಿಸುತ್ತಿವೆ. ಆದರೆ, ಬಿಜೆಪಿ, ಜೆಡಿಎಸ್ ತಮ್ಮ ಪ್ರಯತ್ನದಲ್ಲಿ ಸಫಲವಾಗುವುದಿಲ್ಲ. ನಮ್ಮ ರಾಜಕೀಯ ಶಕ್ತಿಯಿಂದಾಗಿ ಬಿಜೆಪಿ ಮಿಷನ್ 150 ಬದಲಿಗೆ ಮಿಷನ್ 50 ಗೆ ಕುಸಿದಿದೆ ಎಂದು ವ್ಯಂಗ್ಯವಾಡಿದ್ದಾರೆ. 
 
ಪ್ರಧಾನಿ ಮೋದಿ ಸರಕಾರದಲ್ಲಿ ಎಂಟು ಸಚಿವರ ವಿರುದ್ಧ ಎಫ್‌ಐಆರ್ ದಾಖಲಾಗಿವೆ. 12 ಸಚಿವರು ಅಪರಾಧ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ. ಅವರು ರಾಜೀನಾಮೆ ನೀಡಿದ್ದಾರಾ? ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಕೂಡಾ ಅಪರಾಧ ಪ್ರಕರಣ ಎದುರಿಸುತ್ತಿರುವುದು ಬಿಜೆಪಿಯವರು ಮರೆಯಬಾರದು ಎಂದು ಸಿಎಂ ಸಿದ್ದರಾಮಯ್ಯ ಟಾಂಗ್ ನೀಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ