ಮಂಗಳೂರು ಹಳೆ ವಿಮಾನ ನಿಲ್ದಾಣದಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ಸೋಮವಾರ ರಾತ್ರಿ ಕಂಡು ಬಂದಿದ್ದು, ವಿಮಾನ ನಿಲ್ದಾಣದೊಳಗೆ ಅಕ್ರಮವಾಗಿ ಪ್ರವೇಶಿಸಿದ್ದಾನೆ ಎಂಬ ಆರೋಪಡಿ ಪ್ರಕರಣ ದಾಖಲು ಮಾಡಲಾಗಿದೆ ಎಂದು ಪೊಲೀಸ್ ಆಯುಕ್ತ ಶಶಿಕುಮಾರ್ ತಿಳಿಸಿದ್ದಾರೆ.
ಸೋಮವಾರ ರಾತ್ರಿ ಸುಮಾರು 11 ಗಂಟೆಗೆ ಸಿಐಎಸ್ಎಫ್ ಸಿಬ್ಬಂದಿಯು ಗಸ್ತು ತಿರುಗುತ್ತಿದ್ದಾಗ ರನ್ವೇ ಕಾಮಗಾರಿ ನಡೆಯುತ್ತಿದ್ದ ಹಳೆಯ ವಿಮಾನ ನಿಲ್ದಾಣದ ಎಟಿಎಸ್ ವಿಭಾಗದಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ಕಂಡು ಬಂದಿದ್ದ. ಆತನನ್ನು ಹಿಡಿದು ವಿಚಾರಿಸಿದಾಗ ತನ್ನ ಹೆಸರು ರಾಕೇಶ್, ಬಧುಹಾ ಗ್ರಾಮ, ಮುರ್ಸಿದಾಬಾದ್ ಪಶ್ಚಿಮ ಬಂಗಾಳ ಎಂದು ತಿಳಿಸಿದ್ದ.
ತಾನು ಲಾರಿಯಲ್ಲಿ ಕ್ಲೀನರ್ ಆಗಿ ಕೆಲಸ ಮಾಡಿಕೊಂಡಿದ್ದು, ಲಾರಿ ಚಾಲಕ ತನಗೆ ಸಂಬಳ ನೀಡದೆ ಬಿಟ್ಟು ಹೋಗಿದ್ದು ದಾರಿ ಕಾಣದೆ ವಿಮಾನ ನಿಲ್ದಾಣ ಎಂದೂ ತಿಳಿಯದೇ ಈ ಕಡೆ ಬಂದಿರುವೆ ಎಂದಿದ್ದಾನೆ. ಆ ಬಳಿಕ ಮಂಗಳೂರು ವಿಮಾನ ನಿಲ್ದಾಣದ ಸಿಐಎಸ್ಎಫ್ ಯುನಿಟ್ನ ನಿರೀಕ್ಷಕ ಪ್ರಮೋದ್ ಕುಮಾರ್ ವಿಚಾರಣೆ ನಡೆಸಿ ನಂತರ ಬಜ್ಪೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಅದರಂತೆ ನಿಷೇಧಿತ ಪ್ರದೇಶಕ್ಕೆ ಅಕ್ರಮ ಪ್ರವೇಶ ಮಾಡಿದ ಆರೋಪದ ಮೇಲೆ ಬಜ್ಪೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.