ಪೋಸ್ಟ್ ಆಫೀಸ್ ಈ ಯೋಜನೆಯಲ್ಲಿ ಗಂಡ-ಹೆಂಡತಿಗೆ 59,400 ರೂ; ಪಡೆಯುವುದು ಹೇಗೆ..?
ಸೋಮವಾರ, 21 ಫೆಬ್ರವರಿ 2022 (18:30 IST)
ಅಂಚೆ ಕಛೇರಿಯಲ್ಲಿ ಹಣವನ್ನು ಹಾಕುವುದು ಅತ್ಯುತ್ತಮ ಹೂಡಿಕೆಯ ಆಯ್ಕೆಯಾಗಿದೆ. ಅಂಚೆ ಕಚೇರಿಯಲ್ಲಿ ಹಲವು ರೀತಿಯ ಯೋಜನೆಗಳು ಲಭ್ಯವಿದ್ದು, ಇವುಗಳಲ್ಲಿ ಹಣ ತೊಡಗಿಸಿದರೆ ಆಕರ್ಷಕ ಆದಾಯ ಸಿಗುತ್ತದೆ. ಅಲ್ಲದೆ ಯಾವುದೇ ಅಪಾಯವಿಲ್ಲ. ಅದಕ್ಕಾಗಿಯೇ ಅನೇಕ ಜನರು ಪೋಸ್ಟ್ ಆಫೀಸ್ ಯೋಜನೆಗಳಲ್ಲಿ ಹೂಡಿಕೆ ಮಾಡುತ್ತಿದ್ದಾರೆ. ಆದರೆ, ನೀವು ಪಡೆಯುವ ಆದಾಯವು ನೀವು ಆಯ್ಕೆ ಮಾಡುವ ಯೋಜನೆಯ ಮೇಲೆ ಅವಲಂಬಿತವಾಗಿರುತ್ತದೆ ಎಂಬುದನ್ನು ಗಮನಿಸಬೇಕು.
ತೆರಿಗೆ ಲಾಭ ಬೇಕಿದ್ದರೆ ಒಂದು ಸ್ಕೀಮ್ ನಲ್ಲಿ, ಪ್ರತಿ ತಿಂಗಳು ಹಣ ಸಿಗಬೇಕಾದರೆ ಇನ್ನೊಂದು ಸ್ಕೀಮ್ ನಲ್ಲಿ , ಹೆಣ್ಣು ಮಕ್ಕಳ ಭವಿಷ್ಯಕ್ಕಾಗಿ ಇನ್ನೊಂದು ಸ್ಕೀಮ್ ನಲ್ಲಿ, ಹಿರಿಯ ನಾಗರಿಕರಿಗೆ ಇನ್ನೊಂದು ಸ್ಕೀಮ್ ನಲ್ಲಿ ನಿಮ್ಮ ಅಗತ್ಯಕ್ಕೆ ತಕ್ಕಂತೆ ಸ್ಕೀಮ್ ಕೂಡ ಬದಲಾಗುತ್ತೆ. ಅದಕ್ಕಾಗಿಯೇ ನೀವು ಮೊದಲು ನಿಮ್ಮ ಗುರಿಗಳಿಗೆ ಸೂಕ್ತವಾದ ಯೋಜನೆಯನ್ನು ಆರಿಸಿಕೊಳ್ಳಬೇಕು.
ಪ್ರತಿ ತಿಂಗಳು ವೇತನ ಪಡೆಯಲು ಬಯಸುವವರಿಗೆ, ಅಂಚೆ ಕಚೇರಿಯಲ್ಲಿ ಮಾಸಿಕ ಆದಾಯ ಯೋಜನೆ ಇದೆ. ಈ ಯೋಜನೆಗೆ ಸೇರುವ ಮೂಲಕ, ಇಬ್ಬರೂ ಸಂಗಾತಿಗಳು ವಾರ್ಷಿಕ ರೂ.59,400 ಪಡೆಯಬಹುದಾಗಿದ್ದು, ಜಂಟಿ ಖಾತೆ ಸೌಲಭ್ಯವಿದೆ. ಆದರೆ, ಯೋಜನೆಗೆ ಸೇರಲು ಬಯಸುವವರು ಮುಂಚಿತವಾಗಿ ಅಂಚೆ ಕಚೇರಿಯಲ್ಲಿ ಫಿಕ್ಸೆಡ್ ಡೆಪಾಸಿಟ್ ಮಾಡಬೇಕು. ಈ ಹಣಕ್ಕೆ ನೀವು ಪ್ರತಿ ತಿಂಗಳು ಬಡ್ಡಿ ಪಡೆಯುತ್ತೀರಿ.
ಮಾಸಿಕ ಆದಾಯ ಯೋಜನೆ ಎಂದರೇನು..?
ಅಂಚೆ ಕಚೇರಿಯಲ್ಲಿ ಮಾಸಿಕ ಆದಾಯ ಯೋಜನೆ ಇದೆ. ಈ ಯೋಜನೆಗೆ ಸೇರಿದರೆ ಪ್ರತಿ ತಿಂಗಳು ಆದಾಯ ಸಿಗುತ್ತದೆ. ಅದಕ್ಕಾಗಿಯೇ ಇದನ್ನು ಮಾಸಿಕ ಆದಾಯ ಯೋಜನೆ ಎಂದು ಕರೆಯಲಾಗುತ್ತದೆ. ಈ ಯೋಜನೆಗೆ ಸೇರುವವರು ಕನಿಷ್ಠ ರೂ.1000 ಠೇವಣಿ ಮಾಡಬಹುದು. ಗರಿಷ್ಠ 4.5 ಲಕ್ಷ ರೂ. ಹೂಡಿಕೆ ಮಾಡಬಹುದಾಗಿದ್ದು, ಇದು ಒಂದೇ ಖಾತೆಗೆ ಅನ್ವಯಿಸುತ್ತದೆ. ಅದೇ ಜಂಟಿ ಖಾತೆಯಲ್ಲಿ 9 ಲಕ್ಷದವರೆಗೆ ಠೇವಣಿ ಮಾಡಬಹುದು.
ಈ ಯೋಜನೆಯು ನಿವೃತ್ತ ನೌಕರರು ಮತ್ತು ಹಿರಿಯ ನಾಗರಿಕರಿಗೆ ಸೂಕ್ತವಾಗಿದ್ದು, ಅವರ ಬಳಿ ಇರುವ ಹಣವನ್ನು ಠೇವಣಿ ಇಟ್ಟರೆ ಪ್ರತಿ ತಿಂಗಳು ಆದಾಯ ಬರುತ್ತದೆ. ಯೋಜನೆಯ ಮುಕ್ತಾಯ ಅವಧಿಯು ಐದು ವರ್ಷಗಲಾಗಿದ್ದು, ನೀವು ಹಾಕಿದ ಹಣವನ್ನು ನಂತರ ನಿಮಗೆ ಹಿಂತಿರುಗಿಸಲಾಗುತ್ತದೆ. ಈ ರೀತಿ ನೀವು ಪ್ರತಿ ತಿಂಗಳು ಆದಾಯ ಗಳಿಸುತ್ತೀರಿ. ಈ ಯೋಜನೆಯು ಪ್ರಸ್ತುತ ಶೇಕಡಾ 6.6 ರ ಬಡ್ಡಿದರವನ್ನು ಹೊಂದಿದೆ.
ಗಂಡ ಹೆಂಡತಿ ಇಬ್ಬರು ಒಟ್ಟಾಗಿ ಜಂಟಿ ಖಾತೆ ತೆರೆದು 9 ಲಕ್ಷ ರೂ.ಗಳನ್ನು ಠೇವಣಿ ಇಟ್ಟರೆ ವಾರ್ಷಿಕ ಆದಾಯ 59,400 ರೂ. ಸಿಗುತ್ತದೆ. ಐದು ವರ್ಷಗಳವರೆಗೆ ನೀವು ಈ ರೀತಿಯ ಹಣವನ್ನು ಪಡೆಯಬಹುದು. ಅಗತ್ಯವಿದ್ದರೆ ಮೆಚ್ಯೂರಿಟಿ ಅವಧಿಯನ್ನು ಇನ್ನೂ ಐದು ವರ್ಷಗಳವರೆಗೆ ವಿಸ್ತರಿಸಬಹುದು.