ಮಾಯಣ್ಣ ತಂದೆ ಬಿಬಿಎಂಪಿಯಲ್ಲಿ ಪೌರಕಾರ್ಮಿಕರಾಗಿದ್ದರು. ಅಕಾಲಿಕ ನಿಧನ ಹೊಂದಿದ ಕಾರಣ, ಅನುಕಂಪದ ಆಧಾರದ ಮೇಲೆ ಮಾಯಣ್ಣ ಬಿಬಿಎಂಪಿಯಲ್ಲಿ ಕೆಲಸ ಗಿಟ್ಟಿಸಿಕೊಂಡಿದ್ದ. 2002 ಜನವರಿ 22 ರಲ್ಲಿ ಬಿಬಿಎಂಪಿಗೆ ನೇಮಕವಾಗಿದ್ದ. ತಂದೆ ನಿಧನದ ನಂತರ ಅನುಕಂಪದ ಆಧಾರದ ಮೇಲೆ ದ್ವಿತೀಯ ದರ್ಜೆ ಗುಮಾಸ್ತನಾಗಿ ನೇಮಕಗೊಂಡ. ಮೊದಲು ಮಾಗಡಿ ರೋಡ್ನ ಹೈಸ್ಕೂಲ್ನಲ್ಲಿ ಗುಮಾಸ್ತನಾಗಿದ್ದ ನಂತರ 2004 ರಲ್ಲಿ ಶಾಂತಿನಗರ ಎಇಇ ಕಚೇರಿಗೆ ಪೋಸ್ಟಿಂಗ್ ಆಯ್ತು. ಅಲ್ಲಿಂದ ಮುಂಬಡ್ತಿ ಪಡೆದು ಕೇಂದ್ರ ಕಚೇರಿಗೆ ಬಂದ. ಪಾಲಿಕೆಯ ರಸ್ತೆ ಮತ್ತು ಮೂಲಸೌಕರ್ಯ ವಿಭಾಗಕ್ಕೆ ಮುಂಬಡ್ತಿ ಆಯ್ತು. 2009 ರಂದು ಪಾಲಿಕೆಯ ರಸ್ತೆ ಮತ್ತು ಮೂಲಸೌಕರ್ಯ ವಿಭಾಗದಲ್ಲಿ ಎಫ್ಡಿಸಿಯಾಗಿ ನೇಮಕಗೊಂಡ.
198 ವಾರ್ಡ್ ಗಳ ಪಾಲಿಕೆಯ ರಸ್ತೆ ಮತ್ತು ಮೂಲಸೌಕರ್ಯ ವಿಭಾಗ ಬಿಲ್ಗಳನ್ನ ಮಾಯಣ್ಣನೇ ಪಾವತಿ ಮಾಡುತ್ತಿದ್ದ. ಬಿಲ್ಗಳಿಗೆ ಸಂಬಂಧಿಸಿದಂತೆ ಕಡತಗಳನ್ನ ವಿಲೇವಾರಿ ಮಾಡುತ್ತಿದ್ದ. ಪ್ರತಿ ವರ್ಷ ಎರಡು ಸಾವಿರ ಕೋಟಿಯಷ್ಟು ಅನುದಾನ ಪಾಲಿಕೆಯ ರಸ್ತೆ ಮತ್ತು ಮೂಲಸೌಕರ್ಯ ವಿಭಾಗಕ್ಕೆ ಬರ್ತಾಯಿತ್ತು. ಹೀಗಾಗಿ ಗುತ್ತಿಗೆದಾರರಿಂದ ಬಿಲ್ ಹಾಗೂ ಟೆಂಡರ್ ವೇಳೆ 0.5 ಪರ್ಸೆಂಟೆಜ್ ಪಡೆಯುತ್ತಿದ್ದ. ಪರ್ಸೆಂಟೆಜ್ ಹಣ ಬರುತ್ತಿದ್ದ ಹಿನ್ನೆಲೆ ಕಳೆದ ಹತ್ತು ವರ್ಷದಿಂದ ಒಂದೇ ವಿಭಾಗದಲ್ಲಿ ಕೆಲ್ಸ ಮಾಡುತ್ತಿದ್ದ.ನಕಲಿ ಬಿಲ್ ಹಾಗೂ ನಕಲಿ ಸಹಿ ಹಾಕಿ ಮಾಯಣ್ಣ ಬಿಬಿಎಂಪಿಗೆ ಹಾಗೂ ಸರ್ಕಾರಕ್ಕೆ 135 ಕೋಟಿ ನಷ್ಟವುಂಟು ಮಾಡಿದ್ದ. ಹೀಗಾಗಿ ನಗರಾಭಿವೃದ್ಧಿ ಇಲಾಖೆ ಅಪರ ಮುಖ್ಯಕಾರ್ಯದರ್ಶಿ 2017 ರಲ್ಲಿ ಮಾಯಣ್ಣ ವಿರುದ್ಧ ಶಿಸ್ತು ಕ್ರಮಕ್ಕೆ ಆದೇಶ ಮಾಡಿದ್ದರು. ನಷ್ಟವನ್ನ ಮಾಯಣ್ಣನಿಂದ ವಸೂಲಿಗೂ ಆದೇಶ ಮಾಡಲಾಗಿತ್ತು. ಆದರೆ ಇದೂವರೆಗೂ ಮಾಯಣ್ಣ ವಿರುದ್ಧ ಯಾವ ಅಧಿಕಾರಿಯೂ ಕ್ರಮ ತೆಗೆದುಕೊಂಡಿಲ್ಲ. ಹಲವು ಬಾರಿ ವರ್ಗಾವಣೆ ಮಾಡಿದ್ದರೂ ಪ್ರಭಾವ ಬಳಸಿ ವರ್ಗಾವಣೆ ರದ್ದುಪಡಿಸಿಕೊಂಡು ಪಾಲಿಕೆಯಲ್ಲೇ ಉಳಿದಿದ್ದಾರೆ.