ಕಾರು ಅಪಘಾತ ಪ್ರಕರಣ ಬಗ್ಗೆ ಸ್ಪಷ್ಟನೆ ನೀಡಿದ ನಟ ಪ್ರಜ್ವಲ್, ದಿಗಂತ್
ಗುರುವಾರ, 28 ಸೆಪ್ಟಂಬರ್ 2017 (19:48 IST)
ಬೆಂಗಳೂರು: ಜಯನಗರದ ಸೌತ್ ಎಂಡ್ ಸರ್ಕಲ್ ನಲ್ಲಿ ನಡೆದಿರುವ ಕಾರು ಅಪಘಾತಕ್ಕೂ ತಮಗು ಯಾವುದೇ ಸಂಬಂಧವಿಲ್ಲ ಎಂದು ನಟ ಪ್ರಜ್ವಲ್ ದೇವರಾಜ್ ಸ್ಪಷ್ಟಪಡಿಸಿದ್ದಾರೆ.
ವಿಷಯ ತಿಳಿಯುತ್ತಿದ್ದ ತಮ್ಮ ಫೇಸ್ ಬುಕ್ ಖಾತೆಯಿಂದ ಲೈವ್ ನೀಡಿರುವ ಪ್ರಜ್ವಲ್, ಪ್ರಕರಣದಲ್ಲಿ ಮಾಧ್ಯಮಗಳು ನನ್ನ ಹೆಸರು ಸೇರಿಸಿದ್ದು ತಿಳಿದು ಬೇಸರವಾಯಿತು. ಸದ್ಯ ಗೋವಾದಲ್ಲಿ ಚಿತ್ರದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದೇನೆ. ಆದರೆ ಸಾಮಾಜಿಕ ಕಾಳಜಿ ಇರಬೇಕಾದ ಕೆಲ ವಾಹಿನಿಗಳು ನಮ್ಮ ಕುಟುಂಬದ ಹೆಸರಿಗೆ ಧಕ್ಕೆ ತಂದಿವೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಇನ್ನು ಸುದ್ದಿ ವಾಹಿನಿಗಳೊಂದಿಗೆ ಮಾತನಾಡಿರುವ ನಟ ದಿಗಂತ್, ತಮ್ಮ ವಿರುದ್ಧ ಮಾಡಿರುವ ಆರೋಪವನ್ನು ತಳ್ಳಿಹಾಕಿದ್ದಾರೆ. ವಿಷ್ಣು ಪರಿಚಯವಿರುವುದು ನಿಜ. ಆದರೆ ಘಟನೆ ನಡೆದ ವೇಳೆ ನಾನು ಇರಲಿಲ್ಲ. ಪರಿಚಯವಿರುವ ಮಾತ್ರಕ್ಕೆ ನನ್ನ, ಪ್ರಜ್ವಲ್ ಹೆಸರು ಸೇರಿಸುವುದು ಸರಿಯಲ್ಲ. ಸದ್ಯ ಕನಕಪುರದ ಸಮೀಪದಲ್ಲಿ ತಮ್ಮ ಚಿತ್ರದ ಚಿತ್ರೀಕರಣ ನಡೆಯುತ್ತಿದ್ದು, ಅದರಲ್ಲಿ ತಾವು ನಿರತರಾಗಿರುವುದಾಗಿ ಹೇಳಿದ್ದಾರೆ.
ನಿನ್ನೆ ಖ್ಯಾತ ಉದ್ಯಮಿ ದಿ. ಆದಿಕೇಶವುಲು ಮೊಮ್ಮಗ ವಿಷ್ಣುವಿನ ಕಾರು ಅಪಘಾತವಾಗಿತ್ತು. ವಿಷ್ಣುಸೇರಿದಂತೆ ಘಟನೆಯಲ್ಲಿ ಮೂವರಿಗೆ ಗಾಯವಾಗಿದೆ. ಕಾರಿನಲ್ಲಿ ಗಾಂಜಾ ಸಿಕ್ಕಿದ್ದು, ಘಟನಾ ಸಂದರ್ಭದಲ್ಲಿ ನಟರಾದ ಪ್ರಜ್ವಲ್ ದೇವರಾಜ್ ಮತ್ತು ದಿಗಂತ್ ಜತೆಯಲ್ಲಿದ್ದರು ಎನ್ನಲಾಗಿತ್ತು.