ಮೈಸೂರು: ಮೈಸೂರು ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಅವರಿಗೆ ಅಹ್ವಾನ ನೀಡಿರುವ ಕ್ರಮವನ್ನು ಪ್ರಶ್ನಿಸಿ ಪ್ರತಾಪ್ ಸಿಂಹ ಅವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ (ಪಿಐಎಲ್) ಅರ್ಜಿಗಳನ್ನು ಹೈಕೋರ್ಟ್ ವಜಾಗೊಳಿಸಿದೆ. ಕೋರ್ಟ್‌ನಲ್ಲಿ ಹಿನ್ನಡೆಯಾಗುತ್ತಿದ್ದ ಹಾಗೇ ಮಾಜಿ ಸಂಸದರು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಂಚಿಕೊಂಡು ಬರೆದು ಪೋಸ್ಟ್ ಹಾಕಿದ್ದಾರೆ.
ಈ ಭಾಷಣವನ್ನು ಕೋರ್ಟ್‌ನ ಮುಂದಿಟ್ಟಿದ್ದೆವು, ಇದಕ್ಕೆ ಅಭಿವ್ಯಕ್ತಿ ಸ್ವಾತಂತ್ರ್ಯದಲ್ಲಿ ಅವಕಾಶವಿದೆ ಎನ್ನುವುದಾದರೆ, ಇದು ಹಿಂದೂ ದೇವತೆ ಮತ್ತು ಹಿಂದೂ ಸಂಸ್ಕೃತಿಯ ಅಂಗವಾಗಿರುವ ಅರಿಶಿಣ ಕುಂಕುಮದ ಮೇಲಿನ ದ್ವೇಷವಲ್ಲ ಎನ್ನುವುದಾದರೆ ನಮ್ಮ ನಾಯಕರ ವಿರುದ್ಧ ಸಿದ್ದರಾಮಯ್ಯ ಸರ್ಕಾರ ಹಾಕಿರುವ ಬಹಳಷ್ಟು FIRಗಳನ್ನು ಕೂಡಲೇ ರದ್ದಾಗಬೇಕಾಗುತ್ತದೆ ಎಂದು ಹೇಳಿದ್ದಾರೆ.
ಪಿಐಎಲ್ ಅರ್ಜಿಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ವಿಭು ಖಬ್ರು ಮತ್ತು ನ್ಯಾಯಮೂರ್ತಿ ಸಿ.ಎಂ. ಜೋಷಿ ಅವರಿದ್ದ ವಿಭಾಗೀಯ ಪೀಠ, ವಜಾಗೊಳಿಸಿ ಆದೇಶ ನೀಡಿದೆ.
ದಸರಾ ಉದ್ಘಾಟನೆ ವಿಚಾರದಲ್ಲಿ ಯಾವುದೇ ಹಕ್ಕು ಉಲ್ಲಂಘನೆ ಆಗಿರುವುದು ಕಂಡುಬಂದಿಲ್ಲ, ಹೀಗಾಗಿ ಅರ್ಜಿಯನ್ನು ತಿರಸ್ಕರಿಸಲಾಗಿದೆ ಎಂದು ಪೀಠ ಹೇಳಿದೆ.
ಮಾಜಿ ಸಂಸದ ಪ್ರತಾಪ್ ಸಿಂಹ ಅವರು ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ ಎರಡು ದಿನಗಳ ಬಳಿಕ ಬೆಂಗಳೂರಿನ ಹೆಚ್.ಎಸ್.ಗೌರವ್, ಉದ್ಯಮಿ ಟಿ.ಗಿರೀಶ್ ಕುಮಾರ್ ಹಾಗೂ ಅಭಿನವ ಭಾರತ್ ಪಾರ್ಟಿಯ ರಾಷ್ಟ್ರೀಯ ಉಪಾಧ್ಯಕ್ಷೆ ಆರ್.ಸೌಮ್ಯ ಅವರು ಪ್ರತ್ಯೇಕವಾಗಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.