ಕಾರವಾರ: ಗರ್ಭಧರಿಸಿದ್ದ ಗೋವನ್ನು ಹತ್ಯೆ ಮಾಡಿದ್ದ ಪ್ರಕರಣ ಸಂಬಂಧ ಪೊಲೀಸರು ಓರ್ವ ಆರೋಪಿಯನ್ನು ಬಂಧಿಸಿದ್ದಾರೆ.
ಪ್ರಕರಣ ಭೇದಿಸಿದ ಹೊನ್ನಾವರ ಪೊಲೀಸರು ಇಂದು ಓರ್ವನನ್ನು ಅರೆಸ್ಟ್ ಮಾಡಿದ್ದಾರೆ.
ಬಂಧಿತ ಆರೋಪಿಯನ್ನು ಹೊನ್ನಾವರ ತಾಲೂಕಿನ ವಲ್ಕಿಯ ತೌಫಿಕ್ ಅಹ್ಮದ್ ಜಿದ್ದಾ ಎಂದು ಗುರುತಿಸಲಾಗಿದೆ. ಆರೋಪಿ ಜ.19 ರಂದು ಗರ್ಭಧರಿಸಿದ್ದ ಗೋವಿನ ವಧೆ ಮಾಡಿ, ರುಂಡ, ಕಾಲುಗಳನ್ನು ಬಿಟ್ಟು ಗೋಮಾಂಸ ಹಾಗೂ ಹೊಟ್ಟೆಯಲ್ಲಿದ್ದ ಕರುವಿನ ಮಾಂಸ ಹೊತ್ತೊಯ್ದಿದ್ದ. ಈ ಪ್ರಕರಣ ಭಾರೀ ಸದ್ದು ಮಾಡಿತ್ತು.
ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಸಾಲ್ಕೋಡು ಗ್ರಾಮದ ಅರಣ್ಯದಲ್ಲಿ ಗೋ ಹತ್ಯೆ ನಡೆದಿತ್ತು. ಬಂಧಿತ ಆರೋಪಿ, ಗೋವಿನ ವಧೆಗೆ ಸಹಕರಿಸಿ, ಬೈಕ್ ಮೂಲಕ ಮಾಂಸವನ್ನು ಕೊಂಡೊಯ್ದಿದ್ದ. ಕೃತ್ಯದಲ್ಲಿ ಭಾಗಿಯಾದ ಮೂರು ಜನ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.
ಈ ಸಂಬಂಧ ಹೊನ್ನಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಎಸ್‍ಪಿ ಎಂ.ನಾರಾಯಣ್ ಅವರು ಆರು ವಿಶೇಷ ತಂಡ ರಚಿಸಿ ಪ್ರಕರಣದ ತನಿಖೆ ಕೈಗೊಂಡಿದ್ದಾರೆ.