ಅಕಾಲಿಕ ಮಳೆ ಪ್ರಮಾಣ ಹೆಚ್ಚಳ..!

ಭಾನುವಾರ, 7 ನವೆಂಬರ್ 2021 (20:17 IST)
ಬೆಂಗಳೂರು: ಈ ವರ್ಷ ಅಕಾಲಿಕ ಮಳೆ ಹೆಚ್ಚಿನ ಪ್ರಮಾಣದಲ್ಲಿ ಆಗುತ್ತಿದೆ. ಮಳೆ ಸಂಬಂಧಿತ ಹಾನಿ ತಡೆಗೆ ತುರ್ತು, ಅಲ್ಪಾವಧಿ ಹಾಗೂ ದೀರ್ಘಾವಧಿ ಕ್ರಮಗಳನ್ನು ತಕ್ಷಣವೇ ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧಿಕಾರಿಗಳಿಗೆ ಸೂಚಿಸಿದರು.
ಬೆಂಗಳೂರು ನಗರದಲ್ಲಿ ಸುರಿಯುತ್ತಿರುವ ಮಳೆಯಿಂದ ಉಂಟಾಗಿರುವ ಹಾನಿಗೆ ಸಂಬಂಧಿಸಿದಂತೆ ಅವರು ಗೃಹ ಕಚೇರಿ ಕೃಷ್ಣಾದಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು, ಇನ್ನೆರಡು ದಿನಗಳ ಕಾಲ ಬೆಂಗಳೂರಿನಲ್ಲಿ ಮಳೆಯಾಗುವ ಸಾಧ್ಯತೆ ಇರುವ ಬಗ್ಗೆ ಹವಾಮಾನ ಮುನ್ಸೂಚನೆ ಇದೆ. ಬೆಂಗಳೂರು ಮಳೆಯನ್ನು ಗಂಭೀರವಾಗಿ ಪರಿಗಣಿಸಬೇಕು ಎಂದರು.
ಮಳೆಯನ್ನು ನಿಭಾಯಿಸುವ ವಿಧಾನ ಬದಲಾಯಿಸಿ, ಮಳೆಯಿಂದ ಆಗುತ್ತಿರುವ ಹಾನಿಗೆ ಶಾಶ್ವತ ಪರಿಹಾರವನ್ನು ಕಂಡುಕೊಳ್ಳಬೇಕು. ಬೆಂಗಳೂರು ಅಂತರರಾಷ್ಟ್ರೀಯ ನಗರವಾಗಿದ್ದು, ನಗರದಲ್ಲಿ ಮಳೆಯಿಂದಾಗುವ ಹಾನಿಯನ್ನು ತಡೆಗಟ್ಟಲು ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಬೇಕು ಎಂದರು.
ತೀವ್ರ ಪ್ರವಾಹವಾಗುವ ಪ್ರದೇಶಗಳನ್ನು ಹಾಗೂ ಮುಖ್ಯ ಚರಂಡಿಗಳಲ್ಲಿ ಸಮಸ್ಯೆ ಇರುವಲ್ಲೆಲ್ಲಾ ಗುರುತಿಸಿ ಸರಿಪಡಿಸಬೇಕು. ಚರಂಡಿಗಳ ನಿರ್ಮಾಣ ಮಾಡುವಾಗ ಅವುಗಳ ವಿನ್ಯಾಸವನ್ನು ಸೂಕ್ತವಾಗಿ ಮಾಡಬೇಕು. ರಾಜಕಾಲುವೆಗಳ ಸುತ್ತಲು ಅಕ್ರಮ ಬಡಾವಣೆಗಳು ಬಂದಿವೆ. ಪ್ರಾರಂಭದಲ್ಲಿಯೇ ಅಕ್ರಮವನ್ನು ತಡೆಯಬೇಕಿತ್ತು. ಆದರೆ ಆಡಳಿತಾತ್ಮಕವಾಗಿ ಕ್ರಮಗಳನ್ನು ಕೈಗೊಳ್ಳಲೇಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ