ಉಕ್ರೇನ್-‌ ರಷ್ಯಾ ಯುದ್ಧ ಅಂತ್ಯಗೊಳಿಸಲು ಪ್ರಧಾನಿ ಮೋದಿ ಮಧ್ಯಪ್ರವೇಶಿಸಲಿ: ಉಕ್ರೇನ್‌ ರಾಯಭಾರಿ

ಗುರುವಾರ, 24 ಫೆಬ್ರವರಿ 2022 (20:31 IST)
ಉಕ್ರೇನ್‌ ಮೇಲಿನ ರಷ್ಯಾ ದಾಳಿ ಅಂತ್ಯಗೊಳಿಸಲು ಭಾರತದ ಪ್ರಧಾನಿ ನರೇಂದ್ರ ಮೋದಿ ಮಧ್ಯಪ್ರವೇಶಿಸುವಂತೆ ಉಕ್ರೇನ್‌ ನ ರಾಯಭಾರಿ ಡಾ. ಇಗೋರ್‌ ಪೊಲಿಖಾ ಮನವಿ ಮಾಡಿದ್ದಾರೆ.
ಈ ಬಗ್ಗೆ ಮಾಧ್ಯಮಗಳೊಂದಿಗೆ ಭಾವನಾತ್ಮಕವಾಗಿ ಮಾತನಾಡಿದ ಅವರು, “ರಷ್ಯಾ ಅಧ್ಯಕ್ಷ ವಿಶ್ವದ ಯಾವ ರಾಷ್ಟ್ರದ ನಾಯಕರ ಮಾತು ಕೇಳುತ್ತಾರೋ ತಿಳಿದಿಲ್ಲ.  ಭಾರತ ವಿಶ್ವದ ಬಲಿಷ್ಠ ರಾಷ್ಟ್ರವಾಗಿದೆ. ನಮಗೆ ಭಾರತದ ಪ್ರಧಾನಿ ಮೋದಿ ಅವರ ಮೇಲೆ ಭರವಸೆ ಇದೆ. ಪ್ರಧಾನಿ ಮೋದಿ ಅವರ ಮಾತನ್ನಾದರೂ ಪುಟಿನ್‌ ಯೋಚಿಸಬೇಕು. ನಾವು ಭಾರತದಿಂದ ಹೆಚ್ಚು ನಿರೀಕ್ಷೆ ಹೊಂದಿದ್ದೇವೆ. ಹಾಗಾಗಿ ಉಕ್ರೇನ್‌ ಬಿಕ್ಕಟ್ಟಿನ ಸಮಯದಲ್ಲಿ ಭಾರತ ಬಲವಾಗಿ ಬೆಂಬಲಿಸುವಂತೆ ಕೋರುತ್ತೇವೆ.”
“ಪ್ರಧಾನಿ ಮೋದಿ ವಿಶ್ವದ ಅತ್ಯಂತ ಶಕ್ತಿಶಾಲಿ ಹಾಗೂ ಗೌರವಾನ್ವಿತ ನಾಯಕರಲ್ಲಿ ಒಬ್ಬರು. ಈ ವೇಳೆ ಭಾರತ ಜಾಗತಿಕವಾಗಿ ತನ್ನ ಪಾತ್ರವಹಿಸಿಕೊಳ್ಳಬೇಕು ಎಂದು ನಾವು ಮನವಿ ಮಾಡಿಕೊಳ್ಳುತ್ತೇವೆ” ಎಂದರು.
ಇಂದು ರಷ್ಯಾ ಉಕ್ರೇನ್‌ ಮೇಲೆ ಯುದ್ಧ ನಡೆಸುವುದಾಗಿ ಘೊಷಿಸಿದ್ದು, ಈವರೆಗೆ 40ಕ್ಕೂ ಹೆಚ್ಚು ಉಕ್ರೇನ್‌ ಸೈನಿಕರು ಹಾಗೂ 10 ಮಂದಿ ನಾಗರಿಕರು ರಷ್ಯಾದ ದಾಳಿಗೆ ಮೃತಪಟ್ಟಿದ್ದಾರೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ