ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ ಅವಕಾಶ ಹೈಕೋರ್ಟ್

ಗುರುವಾರ, 3 ಮಾರ್ಚ್ 2022 (16:04 IST)
ಕಾಂಗ್ರೆಸ್ ಪಾದಯಾತ್ರೆಗೆ ಹೈಕೋರ್ಟ್​ ಅಸಮಾಧಾನ ವ್ಯಕ್ತಪಡಿಸಿದ್ದು, ಫ್ರೀಡಂ ಪಾರ್ಕ್ ಹೊರತುಪಡಿಸಿ ಬೆಂಗಳೂರು ನಗರದಲ್ಲಿ ಇನ್ಮುಂದೆ ಯಾವುದೇ ಪ್ರತಿಭಟನೆಗಳನ್ನು ಕೈಗೊಳ್ಳದಂತೆ ಆದೇಶ ಹೊರಡಿಸಿದೆ.
 
ಬೆಂಗಳೂರು: ಫ್ರೀಡಂಪಾರ್ಕ್ ಹೊರತುಪಡಿಸಿ ರಾಜಧಾನಿ ಬೆಂಗಳೂರಿನ ಯಾವುದೇ ಭಾಗದಲ್ಲಿಯೂ ರಾಜಕೀಯ ಪಕ್ಷಗಳು ಹಾಗೂ ಸಂಘಟನೆಗಳು ಪ್ರತಿಭಟನೆ ನಡೆಸಬಾರದು ಎಂದು ಹೈಕೋರ್ಟ್ ಕಟ್ಟಪ್ಪಣೆ ಮಾಡಿದೆ.
ರಾಜಕೀಯ ಪಕ್ಷಗಳು ಹಾಗೂ ಸಂಘಟನೆಗಳು ಪ್ರತಿ ಬಾರಿ ಪಾದಯಾತ್ರೆ-ಪ್ರತಿಭಟನೆ ಕೈಗೊಂಡಾಗಲೂ ಜನಸಾಮಾನ್ಯರು ತೀವ್ರ ಸಂಕಷ್ಟಕ್ಕೆ ಸಿಲುಕುತ್ತಿರುವ ಹಿನ್ನೆಲೆಯಲ್ಲಿ ಹೈಕೋರ್ಟ್ ಈ ಆದೇಶ ಹೊರಡಿಸಿದೆ.
 
ಈ ಕುರಿತಂತೆ ಹೈಕೋರ್ಟ್ ದಾಖಲಿಸಿಕೊಂಡಿರುವ ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಹಾಗೂ ನ್ಯಾಯಮೂರ್ತಿ ಎಸ್.ಆರ್ ಕೃಷ್ಣ ಕುಮಾರ್ ಅವರಿದ್ದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
 
ವಿಚಾರಣೆ ಆರಂಭವಾಗುತ್ತಿದ್ದಂತೆ ಇಂದಿನ ಪ್ರತಿಭಟನೆ ಕುರಿತು ಪ್ರಸ್ತಾಪಿಸಿದ ನ್ಯಾಯಮೂರ್ತಿ ಎಸ್.ಆರ್ ಕೃಷ್ಣಕುಮಾರ್, ನಗರದಲ್ಲಿ ಪ್ರತಿಭಟನೆ 'ಪಾದಯಾತ್ರೆಗಳನ್ನು ತಡೆಯಲು ಸಾಧ್ಯವಿಲ್ಲವೇ?, ಇಂದು ಮೇಕ್ರಿ ಸರ್ಕಲ್ ಅರಮನೆ ರಸ್ತೆ ದಾಟಿ ಬರಲು ನಮಗೇ ಒಂದು ಗಂಟೆ ಸಮಯ ಹಿಡಿಯಿತು. ಏನಾದರೂ ಕ್ರಮ ಕೈಗೊಳ್ಳಬೇಕಲ್ಲವೇ?' ಎಂದರು.
 
ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಸರ್ಕಾರದ ಪರ ವಕೀಲರನ್ನು ಪ್ರಶ್ನಿಸಿ, ಪ್ರತಿಭಟನೆ-ಪಾದಯಾತ್ರೆಗಳಿಗೆ ನಿರ್ದಿಷ್ಟ ಜಾಗವನ್ನೇಕೆ ನಿಗದಿ ಮಾಡಬಾರದು?, ರಸ್ತೆಯಲ್ಲಿ ಪ್ರತಿಭಟನೆ ಮಾಡಿದರೆ ಜನರು ಏನು ಮಾಡಬೇಕು?, ಅವರು ಯಾವುದಕ್ಕಾದರೂ ಪ್ರತಿಭಟನೆ ಮಾಡಲಿ. ಫ್ರೀಡಂ ಪಾರ್ಕ್​​​ನಲ್ಲಿ ಮಾಡಲಿ. ಪ್ರತಿಭಟನೆಗಳಿಂದ ಜನಸಾಮಾನ್ಯರಿಗೆ ತೊಂದರೆ ಉಂಟುಮಾಡುವವರ ವಿರುದ್ಧ ಯಾವ ರೀತಿ ಕ್ರಮ ಕೈಗೊಳ್ಳಬಹುದು? ಎಂದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ