ಕಲಬುರಗಿ : ಪಿಎಸ್‌ಐ ನೇಮಕಾತಿ ಅಕ್ರಮದಲ್ಲಿ ದಿವ್ಯಾಹಾಗರಗಿ, ಆರ್.ಡಿ. ಪಾಟೀಲ್ ಕಿಂಗ್‌ಪಿನ್ ಎಂಬುವುದನ್ನು ಒಪ್ಪುವುದಿಲ್ಲ. ಸಣ್ಣವರನ್ನೇ ಬಂಧಿಸಿ ದೊಡ್ಡದಾಗಿ ಸಾಧಿಸಿದವರಂತೆ ಸರ್ಕಾರ ಬಿಂಬಿಸಿಕೊಳ್ಳುತ್ತಿದೆ. ಕಿಂಗ್‌ಪಿನ್‌ಗಳು ಬೆಂಗಳೂರಲ್ಲಿ ಇದ್ದಾರೆ. ಅವರು ಸರ್ಕಾರದ ಒಳಗೂ ಇರಬಹುದು ಎಂದು ಶಾಸಕ ಪ್ರಿಯಾಂಕ ಖರ್ಗೆ ಹೇಳಿದ್ದಾರೆ.
ಹಣ ವರ್ಗಾವಣೆಯಾದ ಹಿನ್ನೆಲೆ ಹಾಗೂ ತಲುಪಿದ ಜಾಗದ ಬಗ್ಗೆ ಮಾಹಿತಿ ಕಲೆ ಹಾಕಿದಾಗ ಅಸಲಿ ಕಿಂಗ್‌ಪಿನ್ ಯಾರೆಂಬುದು ಹೊರಬರುತ್ತದೆ. ಹಗರಣದಲ್ಲಿ ಪ್ರಿಯಾಂಕ್ ಖರ್ಗೆ ಅವರ ಸುತ್ತಮುತ್ತಲಿನವರು ಇದ್ದಾರೆ ಎಂದು ಗೃಹ ಸಚಿವರು ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಗೃಹ ಸಚಿವರಿಗೆ ಮಾಹಿತಿ ಕೊರತೆ ಇದೆ, ನಾವು ಭಾಗಿಯಾಗಿರುವ ಬಗ್ಗೆ ಸರ್ಕಾರಕ್ಕೆ ಎಲ್ಲಾ ಮಾಹಿತಿ ಇದ್ದರೆ ನಮ್ಮನ್ನೇ ಬಂಧಿಸಲಿ. ಗೃಹ ಸಚಿವರು ಇದರಲ್ಲಿ ಭಾಗಿಯಾಗಿದ್ದಾರೆ ಎಂದು ನಾನು ಹೇಳಲಾರೆ. ಆದರೆ ಯಾರನ್ನೋ ರಕ್ಷಿಸಲು ಹೋಗಿ ಅವರು ಹರಕೆಯ ಕುರಿಯಾಗುತ್ತಿದ್ದಾರೆ ಎಂದರು.
ಪಿಎಸ್‌ಐ ನೇಮಕಾತಿ ಅಕ್ರಮ ಪ್ರಕರಣದಲ್ಲಿ ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆಗೆ ಸಿಐಡಿ 3ನೇ ನೋಟಿಸ್ ನೀಡಿದೆ. ಕಲಬುರಗಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಬಿಡುಗಡೆ ಮಾಡಿದ ಆಡಿಯೋ ಕ್ಲಿಪ್ಪಿಂಗ್ ಹಾಗೂ ಇತರೆ ಸಾಕ್ಷ್ಯಾಧಾರಗಳನ್ನು ಒದಗಿಸುವಂತೆ ಸಿಐಡಿ ನೋಟಿಸ್ ನೀಡಿದೆ. ಈ ನೋಟಿಸ್ ಸ್ವೀಕರಿಸಿದ ಎರಡು ದಿನದೊಳಗೆ ತನಿಖಾಧಿಕಾರಿ ಮುಂದೆ ಹಾಜರಾಗಿ ಪಿಎಸ್‌ಐ ನೇಮಕಾತಿ ಅಕ್ರಮ ಪ್ರಕರಣದ ಕುರಿತು ಹೇಳಿಕೆ ದಾಖಲಿಸುವಂತೆ ಪ್ರಿಯಾಂಕ ಖರ್ಗೆ ಅವರಿಗೆ ಡಿವೈಎಸ್ಪಿ ನರಸಿಂಹಮೂರ್ತಿ ಸೂಚಿಸಿದ್ದಾರೆ. ಎರಡು ನೋಟಿಸ್ ನೀಡಿದ್ರು ಪ್ರಿಯಾಂಕ್ ಖರ್ಗೆ ವಿಚಾರಣೆಗೆ ಹೋಗಿರಲಿಲ್ಲ.
ಇದೀಗ ಮೂರನೇ ನೋಟಿಸ್ ನೀಡಿರುವ ಬಗ್ಗೆ ಪ್ರತಿಕ್ರಿಯಿಸಿರುವ ಪ್ರಿಯಾಂಕ್ ಖರ್ಗೆ, ಸರ್ಕಾರಕ್ಕೆ ಒಂದು ನೇರ ಸವಾಲು ಹಾಕಿದ್ದಾರೆ. ಸಾಮಾಜಿ ಜಾಲತಾಣಗಳ ಮೂಲಕ ಸರ್ಕಾರಕ್ಕೆ ತಾಕತ್ತಿನ ಸವಾಲು ಹಾಕಿರುವ ಅವರು, 58 ಸಾವಿರ ಯುವಕರ ಭವಿಷ್ಯಕ್ಕಾಗಿ ಪ್ರತಿದಿನ ಸಿಐಡಿಗೆ ಉತ್ತರಿಸಲು ನಾನು ಸಿದ್ಧ! ಸರ್ಕಾರದ ಒತ್ತಡ ಮೆಟ್ಟಿ ನಿಲ್ಲಲು ನಾನು ಸಿದ್ಧ! ತಪ್ಪಿತಸ್ಥರ ವಿರುದ್ಧ ಸಾಕ್ಷಿ ಒದಗಿಸಲು ನಾನು ಸಿದ್ಧ! ಆದರೆ, ಕೋಟಿ ಕೋಟಿ ಲಂಚ ಹೊಡೆದ ಆರೋಪಿಗಳನ್ನು ಬಂಧಿಸುವ ತಾಕತ್ ಈ ಸರ್ಕಾರಕ್ಕೆ ಇದಿಯಾ? ಎಂದು ಪ್ರಶ್ನೆ ಮಾಡುವ ಮೂಲಕ ಸವಾಲು ಹಾಕಿದ್ದಾರೆ. ಈ ಹಿಂದೆ ಕೂಡ ಎರಡು ಬಾರಿ ಸಿಐಡಿ ಪ್ರಿಯಾಂಕ್ ಖರ್ಗೆಯವರಿಗೆ ನೋಟಿಸ್ ಜಾರಿಗೊಳಿಸಿತ್ತು.