ಪಂಜಾಬ್ ಚುನಾವಣೆ: ಹೊಸ ರಾಜಕೀಯ ಪಕ್ಷ ಘೋಷಿಸಿದ ರೈತ ನಾಯಕ ಗುರ್ನಾಮ್ ಸಿಂಗ್

ಶನಿವಾರ, 18 ಡಿಸೆಂಬರ್ 2021 (20:13 IST)
ರೈತ ಮುಖಂಡ ಗುರ್ನಾಮ್ ಸಿಂಗ್ ಚಾದುನಿ ಅವರು ಶನಿವಾರ ತಮ್ಮದೇ ಆದ  ರಾಜಕೀಯ ಪಕ್ಷ ಸಂಯುಕ್ತ ಸಂಘರ್ಷ್ ಪಕ್ಷವನ್ನು ಸ್ಥಾಪಿಸಿದ್ದು, ಮುಂದಿನ ವರ್ಷ ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ.
ಚಾದುನಿ ಅವರು 40 ರೈತ ಸಂಘಗಳ ಸಂಯುಕ್ತ ಕಿಸಾನ್ ಮೋರ್ಚಾದ (ಎಸ್ ಕೆಎಂ) ಸದಸ್ಯರಾಗಿದ್ದಾರೆ. ಎಸ್ ಕೆಎಂ ಕೇಂದ್ರದ ಮೂರು  ಕೃಷಿ ಕಾನೂನುಗಳ ವಿರುದ್ಧ ಒಂದು ವರ್ಷದ ರೈತರ ಆಂದೋಲನವನ್ನು ಮುನ್ನಡೆಸಿದೆ. ಕೃಷಿ ಕಾನೂನನ್ನು ಈಗ ರದ್ದುಗೊಳಿಸಲಾಗಿದೆ.
ಇಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಚಾದುನಿ ಅವರು, "ನಾವು ಸಂಯುಕ್ತ ಸಂಘರ್ಷ್ ಪಕ್ಷವನ್ನು ಆರಂಭಿಸುತ್ತಿದ್ದೇವೆ. ಮುಂದಿನ ವರ್ಷದ ಆರಂಭದಲ್ಲಿ ನಡೆಯಲಿರುವ ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ಸ್ಪರ್ಧಿಸಲಿದೆ. ರಾಜಕೀಯವನ್ನು ಶುದ್ಧೀಕರಿಸುವುದು ಹಾಗೂ  ಒಳ್ಳೆಯ ಜನರನ್ನು ಮುಂದೆ ತರುವುದು ನಮ್ಮ ಉದ್ದೇಶವಾಗಿದೆ" ಎಂದು ಹರ್ಯಾಣ ಭಾರತೀಯ ಕಿಸಾನ್ ಒಕ್ಕೂಟದ ಅಧ್ಯಕ್ಷರೂ ಆಗಿರುವ ಚಾದುನಿ ಹೇಳಿದರು.
ರಾಜಕೀಯ ನಾಯಕರನ್ನು ತರಾಟೆಗೆ ತೆಗೆದುಕೊಂಡ ಅವರು, ಅವರು ಬಡವರ ಹಿತಾಸಕ್ತಿಗಳನ್ನು ಕಡೆಗಣಿಸಿ ಬಂಡವಾಳಶಾಹಿಗಳ ಪರವಾಗಿ ನೀತಿಗಳನ್ನು ರೂಪಿಸುತ್ತಾರೆ ಎಂದು ಹೇಳಿದರು.
ಸಂಯುಕ್ತ ಸಂಘರ್ಷ್ ಪಕ್ಷವು ಜಾತ್ಯತೀತ ಪಕ್ಷವಾಗಲಿದೆ ಮತ್ತು ಸಮಾಜದ ಎಲ್ಲಾ ವರ್ಗಗಳ ಕಲ್ಯಾಣಕ್ಕಾಗಿ ಕೆಲಸ ಮಾಡುತ್ತದೆ ಎಂದು ಹೇಳಿದರು.
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಚಾದುನಿ ಅವರು ಪಂಜಾಬ್‌ನಲ್ಲಿ ಮುಂಬರುವ ಚುನಾವಣೆಯಲ್ಲಿ ತಾನು ಸ್ಪರ್ಧಿಸುವುದಿಲ್ಲ ಎಂದು ಹೇಳಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ