400 ಎಕರೆ ಜಾಗದಲ್ಲಿ ಕಸ ಸಂಸ್ಕರಣೆ ಮಾಡಲು ಪ್ಯ್ಲಾನ್
ಬಿಡಿಸಲಾಗದ ಕಗ್ಗಂಟಾಗಿ ಪರಿಣಮಿಸಿರುವ ರಾಜಧಾನಿಯ ಕಸದ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಮುಂದಾಗಿರುವ ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ಕಂಪನಿಯು 'ಸಮಗ್ರ ಘನತ್ಯಾಜ್ಯ ಸಂಸ್ಕರಣಾ ಘಟಕ' ನಿರ್ಮಾಣಕ್ಕೆ 400 ಎಕರೆ ಜಾಗ ಕೋರಿ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ನಗರದಲ್ಲಿ ನಿತ್ಯ 5500 ಮೆಟ್ರಿಕ್ ಟನ್‌ನಷ್ಟು ಕಸ ಉತ್ಪತ್ತಿಯಾಗುತ್ತಿದ್ದು, ಸಂಗ್ರಹ, ಸಾಗಣೆ, ವಿಲೇವಾರಿ ಮತ್ತು ಸಂಸ್ಕರಣೆಗಾಗಿ ವಾರ್ಷಿಕ ಸಾವಿರ ಕೋಟಿಗಿಂತ ಹೆಚ್ಚು ವ್ಯಯಿಸಲಾಗುತ್ತಿದೆ. ಇಷ್ಟಾದರೂ ಪದೇಪದೆ ಕಸದ ಸಮಸ್ಯೆ ಉಲ್ಭಣಿಸುತ್ತಲೇ ಇದೆ. ಸಾವಿರಾರು ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ 7 ಸಂಸ್ಕರಣಾ ಘಟಕಗಳು ಕೂಡ ನಿಗದಿತ ಸಾಮರ್ಥ್ಯದಷ್ಟು ಕಸ ಪಡೆದು ಸಂಸ್ಕರಣೆ ಮಾಡುತ್ತಿಲ್ಲ. ಇದರಿಂದಾಗಿ ಕಂಪನಿಯು ನಿತ್ಯ 3500 ಟನ್‌ಗಿಂತ ಹೆಚ್ಚು ಕಸವನ್ನು ಭೂಭರ್ತಿ ಘಟಕಗಳಲ್ಲಿ ಹಾಕಿ ನಿಟ್ಟುಸಿರು ಬಿಡುತ್ತಿದೆ.