ಬೆಂಗಳೂರು: ಕಾಂಗ್ರೆಸ್ ಅವಧಿಯಲ್ಲಿ ಕಮಿಷನ್ ದಂಧೆ ಮಿತಿ ಮೀರಿದೆ ಎಂದು ಗುತ್ತಿಗೆದಾರರ ಸಂಘದ ಅಧ್ಯಕ್ಷರ ಆರೋಪ ಉಲ್ಲೇಖಿಸಿ ವಿಪಕ್ಷ ನಾಯಕ ಆರ್ ಅಶೋಕ್ ವಾಗ್ದಾಳಿ ನಡೆಸಿದ್ದಾರೆ.
ಕಳೆದ ಸರ್ಕಾರದ ಅವಧಿಗೆ ಹೋಲಿಸಿದರೆ ಈ ಸರ್ಕಾರದ ಅವಧಿಯಲ್ಲಿ ಕಮಿಷನ್ ದಂಧೆ ಮಿತಿ ಮೀರಿದೆ. ಕಳೆದ ಸರ್ಕಾರದ ಅವಧಿಯಲ್ಲಿ ಶೇ.40 ಕಮಿಷನ್ ಇತ್ತು. ಈ ಸರ್ಕಾರದ ಅವಧಿಯಲ್ಲಿ ಇದು ಮತ್ತಷ್ಟು ಹೆಚ್ಚಾಗಿದೆ. ಗುತ್ತಿಗೆದಾರರ ಸಂಘದ ಸಹಾಯದಿಂದಲೇ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಈಗ ನಮ್ಮನ್ನೇ ಮರೆತಿದೆ. ಎರಡೂವರೆ ವರ್ಷದಲ್ಲಿ ಗುತ್ತಿಗೆದಾರರಿಗೆ 32 ಸಾವಿರ ಕೋಟಿ ರೂ. ಬಾಕಿಯಿದೆ ಎಂದು ಗುತ್ತಿಗೆದಾರರ ಸಂಘದ ಅಧ್ಯಕ್ಷ ಆರ್ ಮಂಜುನಾಥ್ ಆರೋಪಿಸಿದ್ದರು.
ಇದನ್ನು ಉಲ್ಲೇಖಿಸಿ ಆರ್ ಅಶೋಕ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. 40% ಕಮಿಷನ್ ಎಂದು ಬಿಜೆಪಿ ಸರ್ಕಾರದ ಮೇಲೆ ಇಲ್ಲಸಲ್ಲದ ಸುಳ್ಳು ಆರೋಪ, ಅಪಪ್ರಚಾರ ಮಾಡಿ ಕನ್ನಡಿಗರ ದಿಕ್ಕು ತಪ್ಪಿಸಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಪಕ್ಷ ಈಗ ಸಂಪೂರ್ಣವಾಗಿ ಕಮಿಷನ್ ದಂಧೆಯಲ್ಲಿ ಮುಳುಗಿದೆ.
ಸ್ವಾಮಿ ಸಿಎಂ ಸಿದ್ದರಾಮಯ್ಯನವರೇ ಹಾಗು ಡಿಸಿಎಂ ಡಿಕೆ ಶಿವಕುಮಾರ್ ಅವರೇ, ನಿಮ್ಮ ಭ್ರಷ್ಟ ಕಾಂಗ್ರೆಸ್ ಸರ್ಕಾರದ ಕಮಿಷನ್ ದಾಹಕ್ಕೆ ಮಿತಿಯೇ ಇಲ್ಲ, ಬಿಲ್ ಪಾವತಿ ಆಗುತ್ತಿಲ್ಲ, ಟೆಂಡರ್ ಪ್ರಕ್ರಿಯೆ ಸರಿಯಾಗಿ ನಡೆಯುತ್ತಿಲ್ಲ ಎಂದು ಗುತ್ತಿಗೆದಾರರ ಸಂಘ ಸಾಲು ಸಾಲು ಆರೋಪ ಮಾಡುತ್ತಿದೆ. ಈಗೇನು ಹೇಳುತ್ತೀರಿ? ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಡುತ್ತೀರಾ? ಅಥವಾ ಇದೇ ಭಂಡ ಬಾಳು ಮುಂದುವರೆಸುತ್ತೀರಾ? ಸುಳ್ಳು, ಅಪಪ್ರಚಾರ, ಕುತಂತ್ರದಿಂದ 136 ಸೀಟು ಪಡೆದ ಕಾಂಗ್ರೆಸ್ ಪಕ್ಷ, ಈಗ ವಿಧಾನಸಭೆ ವಿಸರ್ಜಿಸಿ ಚುನಾವಣೆ ಎದುರಿಸಿದರೆ, 36 ಸೀಟೂ ಬರುವುದಿಲ್ಲ. ಇದು ನನ್ನ ಗ್ಯಾರೆಂಟಿ ಎಂದು ವಾಗ್ದಾಳಿ ನಡೆಸಿದ್ದಾರೆ.