ಬೆಂಗಳೂರು: ಗಾರ್ಡನ್ ಸಿಟಿ ಈಗ ಜಿಹಾದಿ ಸಿಟಿಯಾಗಿದೆ ಎಂದು ವಿಪಕ್ಷ ನಾಯಕ ಆರ್ ಅಶೋಕ್ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಬೆಂಗಳೂರಿನಲ್ಲಿ ಆಲ್ ಖೈದಾ ಜೊತೆ ನಂಟು ಹೊಂದಿದ್ದ ಬಾಲಕಿಯನ್ನು ಅರೆಸ್ಟ್ ಮಾಡಿದ ಬೆನ್ನಲ್ಲೇ ಅವರು ಈ ರೀತಿ ವಾಗ್ದಾಳಿ ನಡೆಸಿದ್ದಾರೆ.
ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ತನ್ನ ಬ್ರದರ್ಸ್ ಗಳಿಗೆ ರಕ್ಷಣೆಯ ಗ್ಯಾರೆಂಟಿ ಕೊಟ್ಟಿರುವ ಕಾಂಗ್ರೆಸ್ ಸರ್ಕಾರದ ತುಷ್ಟೀಕರಣದ ಪರಿಣಾಮವಾಗಿ ಇವತ್ತು ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ನೆಲಕಚ್ಚಿದ್ದು, ಗಾರ್ಡನ್ ಸಿಟಿ ಜಿಹಾದಿ ಸಿಟಿಯಾಗಿ ಮಾರ್ಪಟ್ಟಿದೆ ಎಂದು ಅಶೋಕ್ ಟೀಕಿಸಿದ್ದಾರೆ.
ಪರ್ವಿನ್ ಎಂಬ ಅಪ್ರಾಪ್ತ ಯುವತಿ ಅಲ್ ಖೈದಾ ಜೊತೆ ನಂಟು ಹೊಂದಿದ್ದಳು. ಇಲ್ಲಿ ಉಗ್ರ ತರಬೇತಿಗೆ ಆಕೆಯನ್ನು ಬಳಸಿಕೊಳ್ಳಲಾಗುತ್ತಿತ್ತು ಎಂದು ತಿಳಿದುಬಂದಿದೆ. ಗುಜರಾತ್ ಪೊಲೀಸರು ಆಕೆಯನ್ನು ಬಂದಿಸಿದ್ದಾರೆ.
ಗೃಹ ಸಚಿವ ಡಾ ಜಿ ಪರಮೇಶ್ವರ್ ಅವರೇ, ಅಲ್ ಖೈದಾ ಉಗ್ರ ಸಂಘಟನೆಯ ನಂಟು ಹೊಂದಿರುವ ಭಯೋತ್ಪಾದಕರು ಬೆಂಗಳೂರಿನಲ್ಲಿ ಸಿಕ್ಕಿರುವುದು ಕೂಡ ಆಕಸ್ಮಿಕ, ಸಣ್ಣ ಘಟನೆ ಎಂದು ತಿಪ್ಪೆ ಸಾರಿಸುತ್ತೀರೋ ಅಥವಾ ಇದರ ಬಗ್ಗೆ ಗಂಭೀರ ಕ್ರಮ ಏನಾದರೂ ಕೈಗೊಳ್ಳುತ್ತೀರೋ? ತಮ್ಮ ಘನ ಸರ್ಕಾರ ಬ್ರ್ಯಾಂಡ್ ಬೆಂಗಳೂರು ಮಾಡದಿದ್ದರೂ ಪರವಾಗಿಲ್ಲ, ಬೆಂಗಳೂರನ್ನು ಬಾಂಬ್ ಸಿಟಿ ಮಾತ್ರ ಮಾಡಬೇಡಿ ಎಂದು ಅಶೋಕ್ ಕಟುವಾಗಿ ಟೀಕಿಸಿದ್ದಾರೆ.