ಬೆಂಗಳೂರು ಮಳೆ ಇಷ್ಟಕ್ಕೇ ನಿಂತಿಲ್ಲ: ಈ ದಿನದಿಂದ ಮತ್ತೆ ಶುರು

Krishnaveni K

ಶುಕ್ರವಾರ, 18 ಅಕ್ಟೋಬರ್ 2024 (11:34 IST)
ಬೆಂಗಳೂರು: ಎರಡು ದಿನಗಳ ಹಿಂದೆ ಅವಾಂತರ ಸೃಷ್ಟಿಸಿದ್ದ ಬೆಂಗಳೂರು ಮಳೆ ನಿನ್ನೆಯಿಂದ ಕೊಂಚ ಬಿಡುವು ನೀಡಿದೆ. ಹಾಗಂತ ಅಷ್ಟಕ್ಕೇ ಸಮಾಧಾನವಾಗಬೇಕಿಲ್ಲ. ಈ ದಿನದಿಂದ ಮತ್ತೆ ಮಳೆಯಾಗಲಿದೆ ಎಂದಿದೆ ಹವಾಮಾನ ವರದಿ.

ವಾಯುಭಾರ ಕುಸಿತದಿಂದಾಗಿ ಸೋಮವಾರ ಮತ್ತು ಮಂಗಳವಾರ ಬೆಂಗಳೂರಿನಲ್ಲಿ ಭಾರೀ ಮಳೆಯಾಗಿತ್ತು. ಈ ವರ್ಷ ಈ ಮಟ್ಟಿಗೆ ಮಳೆ ಬಂದೇ ಇರಲಿಲ್ಲ. ಆ ಪ್ರಮಾಣದಲ್ಲಿ ಮಳೆ ಬಂದಿದ್ದರಿಂದ ಇಡೀ ಬೆಂಗಳೂರಿನ ರಸ್ತೆಗಳೆಲ್ಲಾ ಸಮುದ್ರದಂತಾಗಿತ್ತು. ಕಳೆದ ಎರಡು ದಿನಗಳಿಂದ ಪರಿಸ್ಥಿತಿ ಸಹಜ ಸ್ಥಿತಿಗೆ ಬರುತ್ತಿದೆ.

ನಿನ್ನೆ ಮೋಡ ಕವಿದ ವಾತಾವರಣವಿದ್ದರೂ ಮಳೆಯಿರಲಿಲ್ಲ. ಇಂದು ಕೊಂಚ ಬಿಸಿಲೂ ಕಂಡುಬಂದಿದೆ. ಆದರೆ ಇಷ್ಟಕ್ಕೇ ಮಳೆ ನಿಂತಿಲ್ಲ. ಅಕ್ಟೋಬರ್ 21 ರ ನಂತರ ಮತ್ತೆ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ವರದಿ ನೀಡಿದೆ. ದಕ್ಷಿಣ ಒಳನಾಡಿನಲ್ಲಿ ಅಕ್ಟೋಬರ್ 21 ರವರೆಗೆ ಮಳೆಯಾಗುವ ಸಾಧ್ಯತೆಯಿದೆ.

ಈ ಹಿನ್ನಲೆಯಲ್ಲಿ ಯೆಲ್ಲೊ ಅಲರ್ಟ್ ಘೋಷಿಸಲಾಗಿದೆ. ಕೇವಲ ಬೆಂಗಳೂರು ಮಾತ್ರವಲ್ಲದೆ, ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಬೆಳಗಾವಿ, ಗದಗ, ಧಾರವಾಡ, ಹಾವೇರಿ, ಬಳ್ಳಾರಿ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ತುಮಕೂರು, ವಿಜಯನಗರ ಜಿಲ್ಲೆಗಳಲ್ಲೂ ಮಳೆಯಾಗಲಿದ್ದು ಎಲ್ಲೊ ಅಲರ್ಟ್ ಘೋಷಿಸಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ