ಕೇಂದ್ರ ಸರಕಾರ ದೇಶದಲ್ಲಿರುವ ಅಮೂಲ್ಯ ಲೋಹಗಳ ನಿಕ್ಷೇಪಗಳ ಶೋಧನೆಗೆ ಹೆಚ್ಚಿನ ಒತ್ತು ನೀಡುತ್ತಿದೆ. ದೇಶದಲ್ಲಿ ಸುಮಾರು 900 ಟನ್ ಗಳಷ್ಟು ಬಂಗಾರದ ಲೋಹದ ನಿಕ್ಷೇಪ ಇರುವ ಅಂದಾಜಿದ್ದು ಅದರ ಜೊತೆಗೆ ಕಾಪರ್, ಅಲ್ಯೂಮಿನಿಯಂ ನ ನಿಕ್ಷೇಪಗಳ ಶೋಧನೆಗೂ ಆದ್ಯತೆ ನೀಡಲಾಗುತ್ತಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳು, ಕಲ್ಲಿದ್ದಲು ಮತ್ತು ಗಣಿ ಸಚಿವರಾದ ಶ್ರೀ ಪ್ರಹ್ಲಾದ್ ಜೋಶಿ ತಿಳಿಸಿದರು.
ಆಭರಣ ತಯಾರಿಕಾ ಕ್ಷೇತ್ರ ದೇಶದಲ್ಲಿ ಹೆಚ್ಚು ಉದ್ಯೋಗಾವಕಾಶಗಳನ್ನು ಕಲ್ಪಿಸಿರುವ ಕ್ಷೇತ್ರಗಳಲ್ಲೊಂದಾಗಿದೆ. ಈ ಕ್ಷೇತ್ರದ ಉದ್ಯೋಗದಲ್ಲಿ ತೊಡಗಿಕೊಳ್ಳುವವರಿಗೆ ಹೆಚ್ಚಿನ ಕೌಶಲ್ಯತೆಯ ಅಗತ್ಯತೆ ಇದೆ. ಸಾಂಪ್ರದಾಯಿಕ ಆಭರಣಗಳ ತಯಾರಿಕೆಯಲ್ಲಿರುವ ಬಹಳಷ್ಟು ಜನರು ತಮ್ಮ ಅನುಭವದಿಂದ ಕೌಶಲ್ಯತೆಯನ್ನು ಪಡೆದುಕೊಂಡಿದ್ದಾರೆ. ದೇಶ ವಿದೇಶದಲ್ಲಿ ನಮ್ಮ ದೇಶಧ ಆಭರಣಗಳಿಗೆ ಬೇಡಿಕೆ ಹೆಚ್ಚಾಗಿದೆ. ಈ ಕ್ಷೇತ್ರ ಇನ್ನಷ್ಟು ಅಭಿವೃದ್ಧಿಗೊಳ್ಳಲು ವಿಫುಲ ಅವಕಾಶವಿದೆ. ಈ ಹಿನ್ನಲೆಯಲ್ಲಿ ಯುವ ಜನಾಂಗ ಕೌಶಲ್ಯತೆಯನ್ನು ಹೆಚ್ಚಿಸಿಕೊಳ್ಳುವತ್ತ ಹೆಚ್ಚಿನ ಗಮನ ಹರಿಸಬೇಕು ಎಂದು ಕರೆ ನೀಡಿದರು.