ಇನ್ಮುಂದೆ ಪಡಿತರ ಮಾದರಿಯಲ್ಲಿ ಕುಡಿಯುವ ನೀರು!

ಬುಧವಾರ, 22 ಫೆಬ್ರವರಿ 2017 (09:42 IST)
ಬೆಂಗಳೂರು: ಇನ್ಮುಂದೆ ಕುಡಿಯೋ ನೀರು ಪಡಿತರ ಮಾದರಿಯಲ್ಲಿ...!

ಅಬ್ಬಾ..! ಇಂಥದ್ದೊಂದು ದಿನಗಳು ಎದುರಾಗುತ್ತವೆ ಎಂದು ಬೆಂಗಳೂರಿನ ಮಹಾನಗರ ಜನತೆ ಖಂಡಿತ ಊಹಿಸಿರಲಾರರು. ಪ್ರಸ್ತುತ ವರ್ಷ ಭೀಕರ ಬರ ತಲೆದೋರಿದ್ದು, ಕಾವೇರಿ ಕೊಳ್ಳದಲ್ಲಿ ನೀರು ಬರಿದಾಗುತ್ತಿದೆ. ಈ ಹಿನ್ನೆಲೆಯಲ್ಲಿ ಇದ್ದ ನೀರನ್ನೇ ಎಪ್ರಿಲ್, ಮೇ ತಿಂಗಳವರೆಗೆ ಸಾರ್ವಜನಿಕರಿಗೆ ಪೂರೈಕೆ ಮಾಡಲು ಜಲಸಂಪನ್ಮೂಲ ಇಲಾಖೆ, ನಗರಾಭಿವೃದ್ಧಿ ಇಲಾಖೆ, ಕಾವೇರಿ ನಿಗಮ ಹಾಗೂ ಬೆಂಗಳೂರಿನ ಜಲಮಂಡಳಿ ಅಧಿಕಾರಿಗಳು ಸಭೆ ಸೇರಿ, ಪಡಿತರ ವ್ಯವಸ್ಥೆ ಜಾರಿಗೆ ತರುವ ಕುರಿತು ಚರ್ಚಿಸಿದ್ದಾರೆ.
 
ತೀವ್ರ ಬರಗಾಲದಿಂದಾಗಿ ಜಲಾಶಯಗಳು ಬರಿದಾಗುತ್ತಿದ್ದು, ಕಾವೇರಿ ನದಿ ನೀರನ್ನು ಆಶ್ರಯಿಸಿರುವ ನಗರ ಮತ್ತು ಗ್ರಾಮೀಣ ಪ್ರದೇಶಗಳಿಗೆ ‘ಪಡಿತರ ಮಾದರಿ ವ್ಯವಸ್ಥೆ’ ಜಾರಿಗೆ ತರಲು ಚಿಂತನೆ ನಡೆಸಲಾಗಿದೆ.
 
ಬೆಂಗಳೂರು ಮಹಾನಗರಕ್ಕೆ ಮೇ ಅಂತ್ಯದವರೆಗೆ ನೀರು ಪೂರೈಸಲು ಪ್ರತಿದಿನ 6 ಕ್ಯುಸೆಕ್'ನಂತೆ ಸುಮಾರು 3 ಟಿಎಂಸಿ ನೀರು ಬೇಕಾಗುತ್ತದೆ. ಸದ್ಯ 9ಟಿಎಂಸಿ ನೀರು ಕೆಆರ್‌ಎಸ್‌ ಜಲಾಶಯದಲ್ಲಿ ಲಭ್ಯವಿದ್ದು, ಪ್ರತಿ ತಿಂಗಳು 2.4 ಟಿಎಂಸಿ ನೀರು ಬೇಕಾಗುತ್ತದೆ. ಅಷ್ಟೊಂದು ಪ್ರಮಾಣದ ನೀರು ಲಭ್ಯವಿರದ ಕಾರಣ, ಎಲ್ಲರಿಗೂ ಸಮರ್ಪಕವಾಗಿ ನೀರು ಪೂರೈಕೆ ಮಾಡಬೇಕಿದೆ. ಈ ಹಿನ್ನೆಲೆಯಲ್ಲಿ 'ನಿರ್ದಿಷ್ಟ ಪ್ರಮಾಣ ಮತ್ತು ಅವಧಿ'ಯವರೆಗೆ ಪಡಿತರ ಮಾದರಿಯಲ್ಲಿ ನೀರು ಪೂರೈಸಲು ಚಿಂತನೆ ನಡೆದಿದೆ ಎಂದು ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ