ವಿದ್ಯುತ್ ವಿನಾಯಿತಿ ಸೌಲಭ್ಯ ವಿಸ್ತರಣೆಗೆ ಪೀಣ್ಯ ಕೈಗಾರಿಕೆ ಪ್ರದೇಶ ಪ್ರತಿನಿಧಿಗಳಿಂದ ಬೆಸ್ಕಾಂಗೆ ಮನವಿ

ಬುಧವಾರ, 25 ಮೇ 2022 (20:35 IST)
ಕೈಗಾರಿಕೆ ವಲಯಕ್ಕೆ ನೀಡುತ್ತಿರುವ ರಿಯಾಯಿತಿ ದರದ ವಿದ್ಯುತ್ ಸೌಲಭ್ಯಗಳನ್ನು ಕನಿಷ್ಠ 5 ರಿಂದ 10 ವರ್ಷಗಳ ಅವಧಿಗೆ ನೀಡಬೇಕೆಂದು ಪೀಣ್ಯ ಕೈಗಾರಿಕೆ ವಲಯದ ಪ್ರತಿನಿಧಿಗಳು ಬೆಸ್ಕಾಂಗೆ ಮನವಿ ಮಾಡಿದ್ದಾರೆ. 
ಪೀಣ್ಯ ಕೈಗಾರಿಕೆ ವಲಯದ ಪ್ರತಿನಿಧಿಗಳ ಜತೆ ಬೆಸ್ಕಾಂ ಎಂಡಿ ಪಿ. ರಾಜೇಂದ್ರ ಚೋಳನ್ ಮತ್ತು ಹಿರಿಯ ಅಧಿಕಾರಿಗಳು ಮಂಗಳವಾರ ವಿಸ್ತೃತ ಚರ್ಚೆ ನಡೆಸಿದರು. ಈ ಸಂದರ್ಭದಲ್ಲಿ ಭಾರೀ ವಿದ್ಯುತ್ ಸಂಪರ್ಕಗಳಿಗೆ ಬೆಸ್ಕಾಂ ನೀಡುತ್ತಿರುವ ರಿಯಾಯಿತಿ ದರದ ವಿದ್ಯುತ್ ಸೌಲಭ್ಯಗಳನ್ನು ಪಡೆಯಲು ಕೈಗಾರಿಕೆ ಪ್ರತಿನಿಧಿಗಳಿಗೆ ಬೆಸ್ಕಾಂ ಎಂಡಿ ಮನವಿ ಮಾಡಿದರು. 
ಪೀಣ್ಯ ವಲದಯ ಉಪ ವಿಭಾಗ 4 ರಲ್ಲಿ ವಿದ್ಯುತ್ ವ್ಯತ್ಯಯದ ಸಮಸ್ಯೆಯನ್ನು ಸರಿಪಡಿಸಲಾಗಿದ್ದು, ಪೀಣ್ಯ ಕೈಗಾರಿಕೆ ಪ್ರದೇಶಗಳಿಗೆ  ತಡೆರಹಿತ ವಿದ್ಯುತ್   ನೀಡಲು ಕ್ರಮ ಕೈಗೊಳ್ಳಲಾಗಿದೆ. ಹಾಗೆಯೇ ಕುಂಬಳಗೋಡು ವಲಯದ ವಿದ್ಯುತ್ ಸಮಸ್ಯೆಯನ್ನು ಸರಿಪಡಿಸಲಾಗಿದೆ ಎಂದು ಬೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ.  
ಪೀಣ್ಯ ಕೈಗಾರಿಕೋದ್ಯಮಿಗಳು ಎದುರಿಸುತ್ತಿರುವ ಮೀಟರ್ ಟೆಸ್ಟಿಂಗ್ (ಎಂಟಿ) ಮತ್ತು ವಿಚಕ್ಷಣ ದಳ ಸಿಬ್ಬಂದಿಯಿಂದಾಗುತ್ತಿರುವ ಸಮಸ್ಯೆಗಳ ಪರಿಹಾರಕ್ಕೆ ಆಂತರಿಕ ಸಮಿತಿಯೊಂದನ್ನು ರಚಿಸುವುದಾಗಿ .ರಾಜೇಂದ್ರ ಚೋಳನ್ ಭರವಸೆ ನೀಡಿದರು. ಬೆಸ್ಕಾಂ ನಿರ್ದೇಶಕ (ತಾಂತ್ರಿಕ) ಅವರ ಅಧ್ಯಕ್ಷತೆಯ ಸಮಿತಿಯಲ್ಲಿ ಪೀಣ್ಯ ಕೈಗಾರಿಕೆ ವಲಯದ ಪ್ರತಿನಿಧಿಗಳು ಸದಸ್ಯರಾಗಿರುತ್ತಾರೆ. ಕೈಗಾರಿಕೆ ವಲಯದ ಪ್ರತಿನಿಧಿಗಳು ಎದುರಿಸುತ್ತಿರುವ ಸಮಸ್ಯೆಗಳ ಶಾಶ್ವತ ಪರಿಹಾರಕ್ಕೆ ಈ ಸಮಿತಿ ಸಹಕಾರಿಯಾಗಲಿದೆ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ. 
ಸಣ್ಣ ಮತ್ತು ಅತಿ ಸಣ್ಣ ಕೈಗಾರಿಕೆ ಘಟಕಗಳು ಬಳಸುವ ವಿದ್ಯುತ್ ಶುಲ್ಕದಲ್ಲಿ ಪ್ರತಿ ಯುನಿಟ್ ಗೆ 50 ಪೈಸೆ ವಿನಾಯಿತಿಯನ್ನು ಆರ್ಥಿಕ ವರ್ಷದ 2022-23 ರ ಒಂದು ವರ್ಷಗಳ ಅವಧಿಗೆ ಕೆಇಆರ್ ಸಿ ಅನುಮತಿ ನೀಡಿದೆ. ಕೋವಿಡ್ ಕಾರಣಕ್ಕೆ 2021 ರಲ್ಲಿ ಲಾಕ್ ಡೌನ್ ಇದ್ದ ಕಾರಣ ಕೈಗಾರಿಕೆಗಳು ಕಾರ್ಯ ನಿರ್ಹಹಿಸಿರಲಿಲ್ಲ. 
ಹಸಿರು ಇಂಧನ ಪ್ರಮಾಣ ಪತ್ರದ ಅಡಿಯಲ್ಲಿ ವಿದ್ಯುತ್ ಶುಲ್ಕದಲ್ಲಿ ವಿನಾಯಿತಿ ನೀಡುವಂತೆ ಕೈಗಾರಿಕಾ ಪ್ರತಿನಿಧಿಗಳು ಮನವಿ ಮಾಡಿದ್ದರು. 
ರಿಯಾಯಿತಿ ದರದ ವಿದ್ಯುತ್ ಯೋಜನೆ ಅಡಿಯಲ್ಲಿ ಹಸಿರು ವಿದ್ಯುತ್ ಪ್ರಮಾಣ ಪತ್ರ ವನ್ನು ನೀಡಲು ಕೈಗಾರಿಕೋದ್ಯಮಿಗಳು ಬೆಸ್ಕಾಂಗೆ ಮನವಿ ಮಾಡಿದರು. ರಿಯಾಯಿತಿ ದರದ ವಿದ್ಯುತ್ ಸೇವೆಗಳ ಕುರಿತು ಇನ್ನಷ್ಟು ಜಾಗೃತಿ ಮೂಡಿಸಲು ಮಾರ್ಕೇಟಿಂಗ್ ಟೀಮ್ ರಚಿಸಲು ಬೆಸ್ಕಾಂ ನಿರ್ದರಿಸಿದ್ದು,  ಮಾರ್ಕೇಟಿಂಗ್ ಟೀಮ್ ಭಾರೀ ವಿದ್ಯುತ್ ಸಂಪರ್ಕ ಪಡೆದಿರುವ ಕೈಗಾರಿಕೋದ್ಯಮಿಗಳನ್ನು  ಭೇಟಿಮಾಡಿ ವಿದ್ಯುತ್ ಸೌಲಭ್ಯಗಳ ಕುರಿತು ಮಾಹಿತಿ ನೀಡಲಿದೆ. ಜತೆಗೆ ಕೈಗಾರಿಕೋದ್ಯಮಿಗಳಿಗೆ ರಿಯಾಯಿತಿ ವಿದ್ಯುತ್ ಸೇವೆ ಪಡೆಯಲು ನೋಂದಣಿ ಮಾಡಿಸಲು ಸಹಾಯ ಮಾಡಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ