ಅಂತೂ ಇಂತೂ ರೌಡಿ ಶೀಟರ್ ನಾಗರಾಜನನ್ನ ಪೊಲಿಸರು ಬಂಧಿಸಿದ್ದಾರೆ. ಮನೆ ಮೇಲೆ ಪೊಲೀಸರ ದಾಳಿ ಬಳಿಕ ನಾಪತ್ತೆಯಾಗಿದ್ದ ನಾಗ, ದಿನಕ್ಕೊಂದು ವಿಡಿಯೋ ರಿಲೀಸ್ ಮಾಡಿ ಪೊಲೀಸರ ಮೇಲೆ ಆರೋಪ ಮಾಡಿದ್ದ. ಇದೀಗ, ಬಂಧನದ ವೇಳೆ ಪೊಲೀಸರ ಕಾಲು ಹಿಡಿದುಕೊಂಡು ಗೋಳಾಡಿದ್ದಾನೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ತಮಿಳುನಾಡಿನ ಆರ್ಕಾಟ್ ಬಳಿ ಪೊಲೀಸರ ಕೈಗೆ ಸಿಕ್ಕಿಬಿದ್ದ ನಾಗ 5 ನಿಮಿಷ ಎಸಿಪಿ ರವಿಕುಮಾರ್ ಕಾಲು ಹಿಡಿದುಕೊಂಡು ಗೋಳಾಡಿದ್ದಾನೆ. ಇನ್ಮುಂದೆ ಇಂತಹ ತಪ್ಪು ಮಾಡುವುದಿಲ್ಲ ಬಿಟ್ಟುಬಿಡಿ ಎಂದು ಅಲವತ್ತುಕೊಂಡಿದ್ದಾನೆ. ಹಳೇನೋಟು ರೇಡ್ ಆದ ಬಳಿಕ ಜಾಮೀನು ಸಿಗುವುದಿಲ್ಲ ಎಂದು ಅರಿತು ನಾಪತ್ತೆಯಾದೆ. ಆವೇಶದಲ್ಲಿ ಏನು ಮಾಡಬೇಕೆಂದು ತಿಳಿಯದೇ ಪೊಲೀಸರ ಮೇಲೆ ಆರೋಪ ಮಾಡಿದೆ ಎಂದು ಹೇಳಿರುವುದಾಗಿ ತಿಳಿದುಬಂದಿದೆ.
ಇದೇವೇಳೆ, ಪೊಲೀಸ್ ವಿಚಾರಣೆ ವೇಳೆ 2018ರ ಚುನಾವಣೆಗೆ ಸ್ಪರ್ಧಿಸಲು ಹಣ ಸುಲಿಗೆ ಮಾಡುತ್ತಿದ್ದದ್ದಾಗಿ ತಿಳಿದುಬಂದಿದೆ. ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುವ ಇರಾದೆ ಹೊಂದಿದ್ದ ನಾಗ ಹಣ ಹೊಂದಿಸಲು ಸುಲಿಗೆಯ ಹಾದಿ ಹಿಡಿದಿದ್ದನಂತೆ. ಉದ್ಯಮಿ ಉಮೇಶ್ ಬಳಿ ಹಣ ಸುಲಿಗೆ ಮಾಡಿದ್ದಾಗಿಯೂ ತಪ್ಪೊಪ್ಪಿಕೊಂಡಿದ್ದಾನೆಂದು ತಿಳಿದುಬಂದಿದೆ. ಹಣ ಬದಲಿಸಿಕೊಡುವುದಾಗಿ ಕರೆದು ಹಣ ಸುಲಿಗೆ ಮಾಡುತ್ತಿದ್ದ ಎನ್ನಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ