ನೆರೆ ಪರಿಹಾರಕ್ಕೆ ಎನ್ ಡಿಆರ್ ಎಫ್ ನಿಧಿಯಿಂದ 150 ಕೋಟಿ ರೂ. ಬಳಸಿ: ಸಿಎಂ ಬೊಮ್ಮಾಯಿ ಸೂಚನೆ

ಭಾನುವಾರ, 1 ಆಗಸ್ಟ್ 2021 (14:29 IST)
ರಾಜ್ಯದಲ್ಲಿ ಪ್ರವಾಹ ಸಂತ್ರಸ್ತರ ನೆರವಿಗೆ ಇರುವ 700 ಕೋಟಿ ರೂ. ಬಳಸಿಕೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚಿಸಿದ್ದಾರೆ.
ಬೆಂಗಳೂರಿನಲ್ಲಿ ಭಾನುವಾರ ನೆರೆ ಪರಿಹಾರ ಕುರಿತು ತುರ್ತು ಸಭೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಮಳೆಯಿಂದಾಗಿ 466 ಗ್ರಾಮಗಳಿಗೆ ಹಾನಿಯಾಗಿದ್ದು, 13 ಮಂದಿ ಮೃತಪಟ್ಟಿದ್ದಾರೆ ಎಂದರು.
ನೆರೆ ಪರಿಹಾರಕ್ಕಾಗಿ ರಾಜ್ಯ ಸರಕಾರ 510
ಕೋಟಿ ರೂ. ಬಿಡುಗಡೆ ಮಾಡಿದ್ದು, ತುರ್ತು ಕಾಮಗಾರಿಗೆ 600 ಕೋಟಿ ರೂ. ಬಿಡುಗಡೆ ಮಾಡಲಾಗುವುದು. ಒಟ್ಟಾರೆ ಜಿಲ್ಲಾಧಿಕಾರಿಗಳ ಬಳಿ ಒಟ್ಟು 700 ಕೋಟಿ ಇದ್ದು, ಇದು ಸೇರಿದಂತೆ ಎನ್ ಡಿಆರ್ ಎಫ್ ನಿಧಿಯಿಂದ 150 ಕೋಟಿ ರೂ. ಬಳಸಿಕೊಳ್ಳುವಂತೆ ಸೂಚಿಸಲಾಗಿದೆ ಎಂದು ಅವರು ತಿಳಿಸಿದರು.
ರಾಜ್ಯದಲ್ಲಿ ಮಳೆಯಿಂದ ಆಗಿರುವ ಬೆಳೆ ಹಾನಿ ಕುರಿತು 15 ದಿನದಲ್ಲಿ ಸಮೀಕ್ಷೆ ಮಾಡಿ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ. ಮನೆ ಹಾನಿಯಿಂದ ಸಂಕಷ್ಟಕ್ಕೆ ಒಳಗಾದವರಿಗೆ ತಕ್ಷಣವೇ 50 ಸಾವಿರ ರೂ. ಬಿಡುಗಡೆ ಮಾಡಬೇಕು. ಭಾಗಶಃ ಮನೆ ಹಾನಿಗೆ 3 ಲಕ್ಷ ಹಾಗೂ ಮನೆ ಕಳೆದುಕೊಂಡವರಿಗೆ 5 ಲಕ್ಷ ರೂ. ಪರಿಹಾರ ನೀಡುವಂತೆ ಸೂಚಿಸಲಾಗಿದೆ ಎಂದು ಬೊಮ್ಮಾಯಿ ವಿವರಿಸಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ