ಕಡಿಮೆ ಬೆಲೆಗೆ ಫ್ಲ್ಯಾಟ್ ನೀಡುವುದಾಗಿ ಸಾವಿರಾರು ಜನರಿಗೆ ವಂಚನೆ ಆರೋಪ: ಸಚಿನ್ ನಾಯಕ್ ಬಂಧನ
ಮಂಗಳವಾರ, 14 ಮಾರ್ಚ್ 2017 (16:48 IST)
ಡ್ರೀಮ್ ಇನ್ಫ್ರಾಸ್ಟ್ರಕ್ಚರ್, ಗೃಹ ಕಲ್ಯಾಣ್, ಡೈಲಿ ಪೂಜಾ, ಟಿಜಿಎಸ್, ಸೆಂಡ್ ಮೈ ಗಿಫ್ಟ್ ವಿರುದ್ಧದ 2000 ಜನರಿಗೆ ವಂಚನೆ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಮಡಿವಾಳ ಪೊಲೀಸರು ಆರೋಪಿ ಸಚಿನ್ ನಾಯಕ್ ಸೇರಿ 7 ಮಂದಿಯನ್ನ ಬಂಧಿಸಿದ್ದಾರೆ.
ಕಡಿಮೆ ಬೆಲೆಗೆ ಫ್ಲ್ಯಾಟ್ ನೀಡುವುದಾಗಿ ನಂಬಿಸಿ ಸಾವಿರಾರು ಜನರಿಂದ ಕೋಟ್ಯಂತರ ರೂಪಾಯಿ ಹಣ ಪಡೆದು ವಂಚಿಸಿರುವ ಆರೋಪ ಸಚಿನ್ ನಾಯಕ್ ಮೇಲಿತ್ತು. ಈ ಬಗ್ಗೆ ಪ್ರತಿಭಟನೆ ನಡೆಸಿದ್ದ ಸಾವಿರಾರು ಮಂದಿ ಸಂತ್ರಸ್ತರು ಸಚಿನ್ ನಾಯಕ್ ಬಂಧನಕ್ಕೆ ಒತ್ತಾಯಿಸಿದ್ದರು.
ಇದೀಗ, ಸಚಿನ್ ನಾಯಕ್`ರನ್ನ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, 7 ದಿನ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ.
ಈ ಕುರಿತು, ಪ್ರತಿಕ್ರಿಯಿಸಿರುವ ಗೃಹ ಸಚಿವ ಪರಮೇಶ್ವರ್, ಒಬ್ಬರಿಗೆ ವಂಚನೆ ಮಾಡಿದವರನ್ನೇ ಬಿಡುವುದಿಲ್ಲ. ಸಾವಿರಾರು ಜನರಿಗೆ ವಂಚಿಸಿರುವುದು ಸಾಬೀತಾದರೆ ಕಾನೂನು ರೀತಿ ಕಠಿಣ ಕ್ರಮ ಜರುಗಿಸುವುದಾಗಿ ಹೇಳಿದ್ದಾರೆ.