ಬೆಂಗಳೂರು : ಮಣ್ಣಿನ ಫಲವತ್ತತೆಯನ್ನು ಸಂರಕ್ಷಿಸುವಂತೆ 26 ದೇಶಗಳಲ್ಲಿ ಮಣ್ಣು ಉಳಿಸಿ ಅಭಿಯಾನ ಕೈಗೊಂಡು ಈಶಾ ಪ್ರತಿಷ್ಠಾನದ ಸಂಸ್ಥಾಪಕ ಸದ್ಗುರು ಭಾನುವಾರ ಗುಜರಾತ್ನ ಜಾಮ್ ನಗರದ ಮೂಲಕ ಭಾರತಕ್ಕೆ ವಾಪಸಾಗಿದ್ದಾರೆ.
ಇನ್ನು ಮುಂದಿನ 25 ದಿನಗಳ ಕಾಲ ಭಾರತದ ವಿವಿಧ ಭಾಗಗಳಲ್ಲಿ ಅಭಿಯಾನ ಮುನ್ನಡೆಸಲಿದ್ದಾರೆ. ಭಾರತೀಯ ನೌಕಾಪಡೆಯು ತಮ್ಮ ಸಂಗೀತ ವಾದನದಲ್ಲಿ ಮಣ್ಣು ಉಳಿಸಿ ಅಭಿಯಾನದ ಗೀತೆಯನ್ನು ನುಡಿಸಿ ಸದ್ಗುರು ಅವರನ್ನು ಸ್ವಾಗತಿಸಿದರೆ,
ವಿವಿಧ ರಾಜ್ಯಗಳಿಂದ ಬಂದು ಸೇರಿದ್ದ ಸಾವಿರಾರು ಉತ್ಸಾಹಿಗಳ ಮುಗಿಲು ಮುಟ್ಟುವ ಘೋಷಣೆ, ಮೈನವಿರೇಳಿಸುವ ಡೋಲು ವಾದನ ಮತ್ತು ರೋಮಾಂಚಕ ಜಾನಪದ ಪ್ರದರ್ಶನಗಳ ನಡುವೆ ಸದ್ಗುರು ಭಾರತಕ್ಕೆ ಕಾಲಿಟ್ಟರು.
ಅಭಿಯಾನದ ಭಾಗವಾಗಿ ಸದ್ಗುರು ಅವರು 100 ದಿನಗಳಲ್ಲಿ 30 ಸಾವಿರ ಕಿ.ಮೀ. ಬೈಕ್ ಯಾತ್ರೆ ನಡೆಸುತ್ತಿದ್ದಾರೆ. ಮಾರ್ಚ್ 21 ರಂದು ಲಂಡನ್ನಿಂದ ಆರಂಭವಾದ ಬೈಕ್ ಯಾತ್ರೆ ಯುರೋಪ್, ಮಧ್ಯ ಏಷ್ಯಾದ 27 ರಾಷ್ಟ್ರಗಳಲ್ಲಿ ಸಾಗುತ್ತಿದೆ.
ಇದಕ್ಕೆ ಸಂಬಂಧಿಸಿದಂತೆ ಆ ದೇಶಗಳ ಸರ್ಕಾರಗಳಿಗೆ ನೀತಿಗಳನ್ನು ರೂಪಿಸುವ ಮೂಲಕ ತುರ್ತು ಕ್ರಮ ಕೈಗೊಳ್ಳುವಂತೆ ಸಲಹೆ ನೀಡುತ್ತಿದ್ದಾರೆ. ಈಗಾಗಲೇ ಹಲವು ದೇಶಗಳ ಮುಖ್ಯಸ್ಥರು, ಜಾಗತಿಕ ನಾಯಕರು, ವಿಜ್ಞಾನಿಗಳು, ಪರಿಸರ ಸಂರಕ್ಷಣಾ ಸಂಸ್ಥೆಗಳು ಹಾಗೂ ವಿಶ್ವಸಂಸ್ಥೆ ಅಂಗ ಸಂಸ್ಥೆಗಳು ಅಭಿಯಾನಕ್ಕೆ ಬೆಂಬಲ ಸೂಚಿಸಿವೆ.