ಬಂಡೀಪುರದಲ್ಲಿ ಪ್ರವಾಸಿಗರಿಗೆ ಸಫಾರಿ ಓಪನ್
ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಸುಟ್ಟುಹೋಗಿದ್ದ ಬಂಡೀಪುರದಲ್ಲಿ ಇಂದಿನಿಂದ ಸಫಾರಿ ಮತ್ತೆ ಆರಂಭವಾಗುತ್ತಿದೆ.
ಒಂದು ವಾರಗಳ ಕಾಲ ಬೆಂಕಿಗೆ ಸಿಲುಕಿ ಬಂಡೀಪುರ ರಾಷ್ಟ್ರೀಯ ಉದ್ಯಾನವನದ 4120 ಹೆಕ್ಟೇರ್ ಅರಣ್ಯ ಪ್ರದೇಶ ನಾಶವಾಗಿದೆ. ಇದರಿಂದಾಗಿ ಬಂಡೀಪುರದಲ್ಲಿ ಅರಣ್ಯ ಸವಾರಿಯನ್ನು ಕೆಲ ದಿನಗಳ ಮಟ್ಟಗೆ ನಿಲ್ಲಿಸಲಾಗಿತ್ತು. ಪ್ರತಿದಿನ ಸಾವಿರಾರು ಪ್ರವಾಸಿಗರಿಂದ ಕಿಕ್ಕಿರಿದು ತುಂಬಿರುತ್ತಿದ್ದ ಉದ್ಯಾನವನ ಬೆಂಕಿ ಅವಘಡ ಸಂಭವಿಸಿದ ನಂತರ ಖಾಲಿ ಖಾಲಿಯಾಗಿತ್ತು. ಒಂದಷ್ಟು ಪ್ರವಾಸಿಗರು ಭೇಟಿ ಕೊಟ್ಟರೂ ಸಫಾರಿ ಇಲ್ಲ ಎಂದು ತಿಳಿದ ಕೂಡಲೆ ಹಿಂದಿರುಗುತ್ತಿದ್ದರು. ಆದ್ದರಿಂದ ಉನ್ನತಮಟ್ಟದ ಅಧಿಕಾರಿಗಳೊಂದಿಗೆ ಚರ್ಚಿಸಿ ಇಂದಿನಿಂದ ಸಫಾರಿ ಆರಂಭಿಸಲಾಗುತ್ತಿದೆ.
ಬಂಡೀಪುರ ಅರಣ್ಯದಲ್ಲಿನ ಬೆಂಕಿ ಅನಾಹುತದಲ್ಲಿ ಯಾವುದೇ ಪ್ರಾಣಿಗಳಿಗೆ ಅನಾಹುತವಾಗಿಲ್ಲ. ಇನ್ನು ಮುಂದೆ ಇಂತಹ ಘಟನೆಗಳು ಜರುಗದಂತೆ ಸೂಕ್ತ ಮುನ್ನೆಚ್ಚರಿಕೆ ತೆಗೆದುಕೊಂಡಿರುವುದಾಗಿ ಅರಣ್ಯ ಇಲಾಖೆ ಮುಖ್ಯಸ್ಥರು ಸ್ಪಷ್ಟಪಡಿಸಿದ್ದಾರೆ.