ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ವಿರುದ್ಧ ಕಮಿಷನ್ ಆರೋಪ ಮಾಡಿ ಆತ್ಮಹತ್ಯೆಗೆ ಶರಣಾಗಿದ್ದ ಸಂತೋಷ್ ಪಾಟೀಲ್ ಅಂತ್ಯಕ್ರಿಯೆ ಇಂದು ಬೆಳಗಾವಿ ತಾಲೂಕಿನ ಬಡಸ ಗ್ರಾಮದಲ್ಲಿ ನಡೆಯಿತು. ಸಂತೋಷ್ ಪಾಟೀಲ್ ಅವರ ಜಮೀನಿನಲ್ಲಿ ಕಾಂಗ್ರೆಸ್ ನಾಯಕರ ತೀವ್ರ ವಿರೋಧದ ನಡುವೆಯೂ ಗ್ರಾಮಸ್ಥರು ಹಾಗೂ ಕುಟುಂಬಸ್ಥರು ಸೇರಿ ಅಂತ್ಯಕ್ರಿಯೆ ನೆರವೇರಿಸಿದ್ದಾರೆ. ಶವಸಂಸ್ಕಾರದ ಹಂತದಲ್ಲಿಯೂ ಹೈಡ್ರಾಮಾ ನಡೆದಿದ್ದು, ಕರ್ನಾಟಕ ಸರ್ಕಾರದ ಪ್ರತಿನಿಧಿಗಳು ಸ್ಥಳಕ್ಕೆ ಬರಬೇಕು. ಸಂತೋಷ್ ಮಾಡಿರುವ ಕೆಲಸಕ್ಕೆ ಹಣ ಬಿಡುಗಡೆ ಮಾಡುವ ಖಾತ್ರಿ ಕೊಡಬೇಕು. ಮೃತನ ಪತ್ನಿಗೆ ಸರ್ಕಾರಿ ಕೆಲಸ ಘೋಷಿಸಬೇಕು. ಅಲ್ಲಿಯವರೆಗೂ ಸಮಾಧಿಗೆ ಮಣ್ಣು ಹಾಕಲು ಅವಕಾಶ ಕೊಡುವುದಿಲ್ಲ ಎಂದು ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಆಪ್ತ ಅಡಿವೇಶ ಇಟಗಿ ಪಟ್ಟು ಹಿಡಿದಿದ್ದರು.