ಕಾವೇರಿ ವಿವಾದ: ರಜನಿಕಾಂತ್‌ಗೆ ರೆಬಲ್ ಸ್ಟಾರ್ ಅಂಬರೀಷ್ ತಿರುಗೇಟು!

ಶನಿವಾರ, 17 ಫೆಬ್ರವರಿ 2018 (19:38 IST)
ಬೆಂಗಳೂರು: ಕಾವೇರಿ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ತೀರ್ಪಿಗೆ ಅಸಮಾಧಾನ ವ್ಯಕ್ತಪಡಿಸಿದ ಸೂಪರ್ ಸ್ಟಾರ್ ರಜನೀಕಾಂತ್ ವಿರುದ್ಧ ಕರ್ನಾಟಕದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.
ತೀರ್ಪಿನಿಂದ ತಮಿಳುನಾಡಿಗೆ ಅನ್ಯಾಯವಾಗಿದೆ. ಮೇಲ್ಮನವಿ ಸಲ್ಲಿಸಬೇಕು ಎಂದಿದ್ದ ರಜನಿಕಾಂತ್‌ಗೆ ರೆಬಲ್ ಸ್ಟಾರ್ ಅಂಬರೀಷ್ ತಿರುಗೇಟು ನೀಡಿದ್ದಾರೆ.
 
ಸುದ್ದಿಗಾರರೊಂದಿಗೆ ಮಾತನಾಡಿದ ಅಂಬರೀಷ್ ‘ಕೋರ್ಟ್‌ಗೆ ಹೋಗಿ ಮೇಲ್ಮನವಿ ಸಲ್ಲಿಸಲಿ ಆಗ ಗೊತ್ತಾಗುತ್ತದೆ ಎಂದಿದ್ದಾರೆ. ಅಷ್ಟೇ ಅಲ್ಲ, ಮೂಲತಃ ಕನ್ನಡಿಗರಾದ ರಜನೀಕಾಂತ್ ಹೇಳಿಕೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
 
ಬಹು ನಿರೀಕ್ಷಿತ ಕಾವೇರಿ ನದಿ ನೀರು ವಿವಾದದ ಅಂತಿಮ ತೀರ್ಪನ್ನು ಸುಪ್ರೀಂ ಕೋರ್ಟ್ ತ್ರಿಸದಸ್ಯ ಪೀಠವು ಶುಕ್ರವಾರ ಪ್ರಕಟಿಸಿದ್ದು, ಸೂಪರ್ ಸ್ಟಾರ್ ರಜನಿಕಾಂತ್ ಅವರು ತೀರ್ಪಿನ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು.
 
ಈ ಬಗ್ಗೆ ಪ್ರತಿಕ್ರಿಯಿಸಿದ ನಟ ರಜನಿಕಾಂತ್ ಅವರು’ ಸುಪ್ರೀಂ ಕೋರ್ಟ್ ತ್ರಿಸದಸ್ಯ ನೀಡಿರುವ ತೀರ್ಪಿನಿಂದ ತಮಿಳುನಾಡು ರೈತರಿಗೆ ಅನ್ಯಾಯವಾಗಿದೆ. ರೈತರಿಗೆ ಮಾರಕವಾಗಿರುವ ತೀರ್ಪು ಪುನರ್ ಪರಿಶೀಲನೆಗೆ ತಮಿಳುನಾಡು ಸರ್ಕಾರ ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಬೇಕು’ ಎಂದು ಹೇಳಿದ್ದರು.
 
ಕೊನೆಗೂ ಬಹು ನಿರೀಕ್ಷಿತ ಕಾವೇರಿ ನದಿ ನೀರು ವಿವಾದದ ಅಂತಿಮ ತೀರ್ಪು ಬಂದಿದೆ. ಸುಪ್ರೀಂ ಕೋರ್ಟ್ ಅಂತಿಮ ತೀರ್ಪು ಪ್ರಕಟಿಸಿದ್ದು, ಕರ್ನಾಟಕಕ್ಕೆ 14.5 ಟಿಎಂಸಿ ನೀರು  ಬಿಡಲಿದೆ.
 
ಸುಪ್ರೀಂ ಕೋರ್ಟ್ ನ ತ್ರಿಸದಸ್ಯ ಪೀಠ ಈ ಅಂತಿಮ ತೀರ್ಪು ನೀಡಿದೆ. ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರು ಅಂತಿಮ ತೀರ್ಪು ಪ್ರಕಟಿಸಿದ್ದು, ಆರಂಭದಲ್ಲೇ ಕರ್ನಾಟಕಕ್ಕೆ ಸಂವಿಧಾನದ ಅಡಿಯಲ್ಲಿ ಚೌಕಾಸಿ ಮಾಡುವ ಅಧಿಕಾರವಿದೆ ಎಂದರು.
 
‘ನ್ಯಾಯಾಧಿಕರಣ ಅನುಸರಿಸಿದ ಕ್ರಮ ಸರಿಯಾಗಿದೆ. ನದಿಗಳು ರಾಷ್ಟ್ರೀಯ ಸಂಪತ್ತು. ಯಾವುದೇ ಒಂದು ರಾಜ್ಯ ಸಂಪೂರ್ಣ ಹಕ್ಕು ಸ್ಥಾಪನೆ ಮಾಡುವಂತಿಲ್ಲ. ಎರಡೂ ರಾಜ್ಯಗಳು ಸಮಾನ ಹಂಚಿಕೆ ಮಾಡಬೇಕು. ಪುದುಚೇರಿ ಮತ್ತು ಕೇರಳಕ್ಕೆ ನೀಡುವ ನೀರು ಹಂಚಿಕೆಯಲ್ಲಿ ಬದಲಾವಣೆಯಿಲ್ಲ. ಈ ರಾಜ್ಯಗಳಿಗೆ ಯಥಾಸ್ಥಿತಿ ಕಾಯ್ದುಕೊಳ್ಳಬೇಕು.
 
ಕರ್ನಾಟಕ ತಮಿಳು ನಾಡಿಗೆ ಇನ್ನು ಮುಂದೆ 177 ಟಿಎಂಸಿ ನೀರು ಬಿಡಬೇಕು. ಈ ಮೊದಲು ಇದು 192 ಟಿಎಂಸಿ ಇತ್ತು’ ಎಂದು ನ್ಯಾಯಾಧೀಶರು ತೀರ್ಪು ನೀಡಿದ್ದಾರೆ. ಇದರೊಂದಿಗೆ ಕರ್ನಾಟಕಕ್ಕೆ ಕೊಂಚ ಮಟ್ಟಿನ ರಿಲೀಫ್ ಸಿಕ್ಕಿದೆ.
 
ಇದಲ್ಲದೆ ಕರ್ನಾಟಕ ಹೆಚ್ಚುವರಿ ಪ್ರದೇಶದಲ್ಲಿ ನೀರಾವರಿ ಮಾಡಬಹುದು ಎಂದು ತೀರ್ಪಿನಲ್ಲಿ ಹೇಳಲಾಗಿದೆ. ಈ ಮೂಲಕ ಕರ್ನಾಟಕಕ್ಕೆ ಸುಪ್ರೀಂ ಕೋರ್ಟ್ ಭಾಗಶಃ ಗೆಲುವು ನೀಡಿದೆ.
 
ಸಿದ್ದರಾಮಯ್ಯ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ; ಕೈ ಬಿಟ್ಟ ಸುಪ್ರೀಂ
 
ಕಾವೇರಿ ವಿವಾದದ ಕುರಿತು ಶುಕ್ರವಾರ ಅಂತಿಮ ತೀರ್ಪು ಪ್ರಕಟಿಸಿದ ಸುಪ್ರೀಂ ಕೋರ್ಟ್ ಜೊತೆಗೆ ತಮಿಳುನಾಡು ಸರ್ಕಾರ ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ದಾಖಲಿಸಿದ್ದ ನ್ಯಾಯಾಂಗ ನಿಂದನೆ ಪ್ರಕರಣವನ್ನು ಕೂಡ  ಕೈಬಿಟ್ಟಿರುವುದಾಗಿ ತಿಳಿಸಿದೆ.
 
ಕಾವೇರಿ ನ್ಯಾಯಾಧಿಕರಣದ ಐತೀರ್ಪಿನಂತೆ ನಿಗಧಿತ ಪ್ರಮಾಣದಲ್ಲಿ ನೀರು ಹರಿಸಿಲ್ಲ ಎಂದು ಆರೋಪಿಸಿ ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ 2013ರಲ್ಲಿ ತಮಿಳುನಾಡು ಸರ್ಕಾರ ನ್ಯಾಯಾಂಗ ನಿಂದನೆ ಪ್ರಕರಣವನ್ನು ದಾಖಲಿಸಿತ್ತು. ಆದರೆ ಸುಪ್ರೀಂ ಕೋರ್ಟ್ ಈ ಪ್ರಕರಣವನ್ನು ಮುಂದುವರಿಸಲು ಇಚ್ಛಿಸುವುದಿಲ್ಲ ಎಂದು ತಿಳಿಸಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ