ಜೆಡಿಎಸ್ ಕಾರ್ಯಕರ್ತರ ಸರಣಿ ಕಗ್ಗೊಲೆಗಳಿಗೆ ರಾಜಕೀಯ ಕಾರಣ: ದೇವೇಗೌಡ

ಮಂಗಳವಾರ, 3 ಜನವರಿ 2017 (17:40 IST)
ಮಂಡ್ಯ ಜಿಲ್ಲೆಯಲ್ಲಿ ನಡೆಯುತ್ತಿರುವ ಜೆಡಿಎಸ್ ಕಾರ್ಯಕರ್ತರ ಸರಣಿ ಕಗ್ಗೊಲೆಗಳಿಗೆ ರಾಜಕೀಯ ಕಾರಣ ಎಂದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಆರೋಪಿಸಿದ್ದಾರೆ.
 
ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ನಿಡಘಟ್ಟ ಬಳಿ ಪಕ್ಷದ ಕಾರ್ಯಕರ್ತರಿಂದ ಅಭಿನಂದನೆ ಸ್ವೀಕರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾಲೂಕಿನಲ್ಲಿ ಕಾರ್ಯಕರ್ತರನ್ನು ಕೊಲೆ ಮಾಡಲಾಗಿದೆ. ರಾಜಕೀಯ ಹಿನ್ನೆಲೆಯಿಂದಾಗಿ ಅಪರಾಧಿಗಳನ್ನು ಬಂಧಿಸಿಲ್ಲ ಎನ್ನುವುದು ಚೆನ್ನಾಗಿ ಗೊತ್ತು. ಇದನ್ನು ಸವಾಲಾಗಿಯೇ ಸ್ವೀಕರಿಸುತ್ತೇನೆ ಎಂದು ನೇರವಾಗಿ ಹೇಳಿದರು. 
 
ಕಾನೂನು-ಸುವ್ಯವಸ್ಥೆ ಕಾಪಾಡುವಲ್ಲಿ ರಾಜ್ಯ ಸರಕಾರದ ವೈಪಲ್ಯ ಹಾಗೂ ಅಧಿಕಾರಿಗಳ ಕಾರ್ಯಾಚರಣೆ ಹೇಗಿದೆ ಎನ್ನುವುದನ್ನು ತಿಳಿದುಕೊಂಡಿದ್ದೇನೆ ಎಂದರು.
 
ಗೃಹ ಇಲಾಖೆಯ ಅಧಿಕಾರಿಗಳು ಕೆಂಪಯ್ಯ ಅವರ ಅಧೀನದಲ್ಲಿ ಕೆಲಸ ಮಾಡುತ್ತಿದ್ದಾರೆಂಬುದೂ ಗೊತ್ತಿದೆ. ಇದರ ಬಗ್ಗೆ ತಿಳುವಳಿಕೆ ಇಟ್ಟುಕೊಂಡು ಕೆಲಸ ಮಾಡುತ್ತೇನೆ. ಸರಕಾರ ತನ್ನ ಕರ್ತವ್ಯವನ್ನು ಸರಿಯಾಗಿ ನಿರ್ವಹಣೆ ಮಾಡದಿರುವುದರ ವಿರುದ್ಧ ಹೋರಾಟ ರೂಪಿಸುತ್ತೇನೆ ಎಂದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಎಚ್ಚರಿಕೆ ನೀಡಿದರು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ