ಸಿದ್ದರಾಮಯ್ಯನವರೇ ಲೂಟಿ ಒಪ್ಪಿಕೊಂಡು ರಾಜೀನಾಮೆ ಕೊಡಿ: ವಿಜಯೇಂದ್ರ

Sampriya

ಶನಿವಾರ, 10 ಆಗಸ್ಟ್ 2024 (18:55 IST)
ಬೆಂಗಳೂರು: ಯಡಿಯೂರಪ್ಪನವರ ಬಗ್ಗೆ ಹಗುರವಾಗಿ ಮಾತನಾಡುವುದನ್ನು ಬಿಡಿ. ಮುಖ್ಯಮಂತ್ರಿಗಳೇ ನಿಮ್ಮ ಕುರ್ಚಿ ಉಳಿಸಿಕೊಳ್ಳುವ ಕೆಲಸ ಮಾಡಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ಸವಾಲು ಹಾಕಿದರು.

ಕಾಂಗ್ರೆಸ್ ಸರಕಾರದ ಹಗರಣಗಳನ್ನು ಖಂಡಿಸಿ ಬಿಜೆಪಿ- ಜೆಡಿಎಸ್ ವತಿಯಿಂದ ನಡೆದ ಮೈಸೂರು ಚಲೋ ಪಾದಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಇಂದು ಅವರು ಮಾತನಾಡಿದರು.

ಯಡಿಯೂರಪ್ಪನವರ ರಾಜಕೀಯ ನಿವೃತ್ತಿಯ ಮಾತನ್ನು ಹಿಂದಕ್ಕೆ ಪಡೆಯಿರಿ ಎಂದು ಆಗ್ರಹಿಸಿದರು. ಮುಖ್ಯಮಂತ್ರಿಗಳೇ, ಸಾವಿರಾರು ಕೋಟಿ ಲೂಟಿ ಬಗ್ಗೆ ಒಪ್ಪಿಕೊಂಡು ರಾಜೀನಾಮೆ ಕೊಡಿ ಎಂದು ಒತ್ತಾಯಿಸಿದರು.

ಮುಡಾ ಹಗರಣದಲ್ಲಿ 5 ಸಾವಿರ ಕೋಟಿಯ ಅವ್ಯವಹಾರ ಆಗದೆ ಇದ್ದರೆ ನೀವ್ಯಾಕೆ ಸದನದಿಂದ ಓಡಿಹೋಗಿದ್ದೀರಿ? ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಗಳು ವಿಪಕ್ಷಕ್ಕೆ ಗೊಡ್ಡು ಬೆದರಿಕೆ ಹಾಕಿದ್ದು ಯಾಕೆ? ಹಗರಣಗಳ ಕುರಿತು ಆರೋಪಿಸುವ ಮೊದಲು ವಾಲ್ಮೀಕಿ ನಿಗಮದ ಹಗರಣ, ಮುಡಾ ಹಗರಣದ ವಿವರ ಕೊಡಿ ಎಂದು ಒತ್ತಾಯಿಸಿದರು. ಯಡಿಯೂರಪ್ಪ ಅವರನ್ನು ಕಂಡರೆ ಇನ್ನೂ ನಿಮಗೆ ಭಯವೇ ಎಂದು ಪ್ರಶ್ನಿಸಿದರು. ಯಡಿಯೂರಪ್ಪ ಅವರ ಸಿಎಜಿ ಸಂಬಂಧ ಎಫ್‌ಐಆರ್, ಕುತಂತ್ರ ಮಾಡಿದ್ದನ್ನು ಪ್ರಸ್ತಾಪಿಸಿದರು.

ಸಿದ್ದರಾಮಯ್ಯನವರ ವಿರುದ್ಧ ಈ ಹೋರಾಟವಲ್ಲ; ಭ್ರಷ್ಟ ಮುಖ್ಯಮಂತ್ರಿಗಳ ವಿರುದ್ಧ ನಮ್ಮ ಹೋರಾಟ ಎಂದರಲ್ಲದೆ, ಭ್ರಷ್ಟಾಚಾರ, ಸ್ವಜನ ಪಕ್ಷಪಾತದ ಕಾಂಗ್ರೆಸ್ ಸರಕಾರದ ವಿರುದ್ಧ ಹೋರಾಟ ನಮ್ಮದು ಎಂದು ತಿಳಿಸಿದರು. ನಿಂಗ ಅವರ ಜಮೀನು ಅಕ್ರಮ ಖರೀದಿ, ಅದನ್ನು ಸಿದ್ದರಾಮಯ್ಯನವರ ಶ್ರೀಮತಿಗೆ ನೀಡಿದ್ದನ್ನು ಪ್ರಸ್ತಾಪಿಸಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ