ಜಿಂದಾಲ್ ಗೆ ಭೂಮಿ ನೀಡಿದ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಮತ್ತೊಂದು ಹಗರಣ ಆರೋಪ

Krishnaveni K

ಶನಿವಾರ, 24 ಆಗಸ್ಟ್ 2024 (16:45 IST)
ಬೆಂಗಳೂರು: ಮೂಡ ಹಗರಣ, ವಾಲ್ಮೀಕಿ ನಿಗಮದ ಹಗರಣ, ಅಲ್ಪಸಂಖ್ಯಾತರ ನಿಗಮದ ಹಗರಣ, ಕಾರ್ಮಿಕರ ಇಲಾಖೆಯಲ್ಲೂ ಹಗರಣ, ವಕ್ಫ್ ಹಗರಣ, ಪ್ರವಾಸೋದ್ಯಮ ಇಲಾಖೆಗಳ ಹಗರಣ ನಡೆದಿದೆ. ಹಗರಣಗಳ ಮೇಲೆ ಹಗರಣವನ್ನು ರಾಜ್ಯದ ಕಾಂಗ್ರೆಸ್ ಸರಕಾರ ಮಾಡುತ್ತಿದೆ ಎಂದು ಶಾಸಕ ಅರವಿಂದ ಬೆಲ್ಲದ್ ಅವರು ಟೀಕಿಸಿದರು.

ನಗರದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕರ್ನಾಟಕದಲ್ಲಿ 2023ರಲ್ಲಿ ಕಾಂಗ್ರೆಸ್ ಸರಕಾರ ಅತ್ಯಂತ ದೊಡ್ಡ ಜನಾದೇಶ ಪಡೆದು ಆಡಳಿತಕ್ಕೆ ಬಂದ ಬಳಿಕ ಕಳೆದ 15 ತಿಂಗಳಲ್ಲಿ ಒಂದಾದ ಮೇಲೆ ಒಂದರಂತೆ ಹಗರಣಗಳು ಹೊರಕ್ಕೆ ಬರುತ್ತಿದೆ ಎಂದು ಆರೋಪಿಸಿದರು. ಸಿದ್ದರಾಮಯ್ಯನವರ ಸರಕಾರ ಕೇವಲ 15 ತಿಂಗಳಲ್ಲಿ ಅತ್ಯಂತ ಭ್ರಷ್ಟ ಎಂದು ಜನರಿಂದ ಬಿಂಬಿತವಾಗಿದೆ ಎಂದು ಆರೋಪಿಸಿದರು.

ಮುಡಾ ಹಗರಣದಲ್ಲಿ ಮುಖ್ಯಮಂತ್ರಿಗಳ ಮನೆ ಬಾಗಿಲಿಗೇ ಹಗರಣದ ತನಿಖೆ ಬಂದಿದೆ. ಮುಖ್ಯಮಂತ್ರಿಗಳ ಬಗ್ಗೆ ಇಡೀ ರಾಜ್ಯಾದ್ಯಂತ ಆಕ್ರೋಶ ವ್ಯಕ್ತವಾಗುತ್ತಿದೆ. ಮುಖ್ಯಮಂತ್ರಿಗಳು ಬಹಳ
ಬೇಗನೆ ಮನೆಗೆ ಹೋಗುವ ಸಂದರ್ಭ ಬಂದಂತಿದೆ ಎಂದು ತಿಳಿಸಿದರು.

ಸಿದ್ದರಾಮಯ್ಯನವರಿಗೆ ಕುರ್ಚಿ ಹೋಗುವ ಬಗ್ಗೆ ತಿಳಿದಿದೆ. ಈ ಸಂದರ್ಭದಲ್ಲಿ ಅವರು ಮತ್ತೊಂದು ದೊಡ್ಡ ಹಗರಣವನ್ನು ತಮ್ಮ ಮೇಲೆ ಎಳೆದುಕೊಂಡಿದ್ದಾರೆ. ಜಿಂದಾಲ್ ಕಂಪೆನಿಗೆ ಅತ್ಯಂತ ಕಡಿಮೆ ಬೆಲೆಯಲ್ಲಿ ಭೂಮಿ ಕೊಡುವ ಹಗರಣ ಇದಾಗಿದೆ ಎಂದು ದೂರಿದರು.

ಜಿಂದಾಲ್ ಕಂಪೆನಿಯ ಈ ಭೂಮಿ 1970-71ರಲ್ಲಿ ಕೇಂದ್ರ ಸರಕಾರ ತೆಗೆದುಕೊಂಡ ಭೂಮಿ. ಆಗ ವಿಜಯನಗರ ಸ್ಟೀಲ್ ಲಿಮಿಟೆಡ್ ಕಂಪೆನಿಗೆ ಕೇಂದ್ರ ಸರಕಾರದಿಂದ ಸ್ಟೀಲ್ ಕಂಪೆನಿ ಮಾಡುವ ಉದ್ದೇಶದಿಂದ ಈ ಭೂಮಿ ತೆಗೆದುಕೊಳ್ಳಲಾಗಿತ್ತು ಎಂದು ವಿವರ ನೀಡಿದರು.

ದೇಶದಲ್ಲಿ ಖಾಸಗೀಕರಣದ ಸಂದರ್ಭದಲ್ಲಿ ಈ ಭೂಮಿಯನ್ನು ಕೇಂದ್ರ ಸರಕಾರವು ಕರ್ನಾಟಕ ಸರಕಾರಕ್ಕೆ ಕೊಟ್ಟಿತ್ತು. ಕರ್ನಾಟಕ ಸರಕಾರಕ್ಕೆ ಅತ್ಯಂತ ಕಡಿಮೆ ದರದಲ್ಲಿ ಅಂದರೆ 13 ಕೋಟಿ ಮೊತ್ತಕ್ಕೆ 9,600 ಎಕರೆ ಭೂಮಿಯನ್ನು ಕೇಂದ್ರ ಸರಕಾರ ಕೊಟ್ಟಿತ್ತು ಎಂದು ತಿಳಿಸಿದರು. ಕರ್ನಾಟಕ ಸರಕಾರವು ಬಳಿಕ ಜೆಎಸ್‍ಡಬ್ಲ್ಯೂ ಸ್ಟೀಲ್ ಸಂಸ್ಥೆಗೆ ಸ್ಟೀಲ್ ಪ್ಲಾಂಟ್ ಮಾಡಲು 2006ರಲ್ಲಿ 2 ಸಾವಿರ ಎಕರೆ, 2007ರಲ್ಲಿ ಸುಮಾರು 1700 ಎಕರೆ ಭೂಮಿಯನ್ನು ಕೊಟ್ಟಿತ್ತು ಎಂದು ತಿಳಿಸಿದರು.

ಲೀಸ್ ಕಮ್ ಸೇಲ್ ಡೀಡನ್ನು ಖಾಯಂ ಮಾಡುವ ವೇಳೆ ಆಗಿನ ಕಾಂಗ್ರೆಸ್ ಸರಕಾರವು ಪ್ರತಿ ಎಕರೆಗೆ 1.20 ಲಕ್ಷ ರೂಪಾಯಿಗೆ ಭೂಮಿ ನೋಂದಣಿ ಮಾಡುವ ನಿರ್ಧಾರ ತೆಗೆದುಕೊಂಡಾಗ ಬಿಜೆಪಿ ಸದಸ್ಯರು ಅದರ ವಿರುದ್ಧ ರಾಜ್ಯಾದ್ಯಂತ ಹೋರಾಟ ಮಾಡಿದ್ದೆವು ಎಂದರು. ಆಗ ನಿರ್ಧಾರ ಬಾಕಿ ಆಗಿತ್ತು. ನಮ್ಮ ಸರಕಾರ ಬಂದಾಗಲೂ ಕಡಿಮೆ ಬೆಲೆಗೆ ಖನಿಜಯುಕ್ತ ಈ ಭೂಮಿ ಕೊಡುವ ನಿರ್ಧಾರ ಬೇಡ ಎಂದಿದ್ದೆವು ಎಂದು ಹೇಳಿದರು.

ಆಗ ಪಿಐಎಲ್ ಕೂಡ ಹಾಕಿದ್ದರು. ದರ ಹೆಚ್ಚಳ ಮಾಡುವುದಾಗಿ ಯಡಿಯೂರಪ್ಪ ಅವರ ಸರಕಾರವೂ ಪರೋಕ್ಷವಾಗಿ ಕೋರ್ಟಿಗೆ ತಿಳಿಸಿತ್ತು. ನಂತರ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯನವರ ಸರಕಾರವು ಮನೆಗೆ ಹೋಗುವ ಗ್ಯಾರಂಟಿ ಇರುವ ಕಾರಣಕ್ಕೆ ಯಾವುದೇ ರೀತಿ ಹಿಂದೆ ಮುಂದೆ ನೋಡದೆ ಖನಿಜಭರಿತ ಜಾಗ ಇರುವ ಸಂಡೂರಿನಲ್ಲಿ ಸುಮಾರು 3,667 ಎಕರೆಯ ಪೈಕಿ 2 ಸಾವಿರ ಎಕರೆಯನ್ನು 1.20 ಲಕ್ಷಕ್ಕೆ ಹಾಗೂ 1,667 ಎಕರೆಯನ್ನು 1.50 ಲಕ್ಷಕ್ಕೆ ಕೊಡುವ ನಿರ್ಧಾರವನ್ನು ಮೊನ್ನೆ ಸಚಿವಸಂಪುಟ ಸಭೆಯಲ್ಲಿ ತೆಗೆದುಕೊಂಡಿದ್ದಾರೆ ಎಂದು ತಿಳಿಸಿದರು.

ಅದರಲ್ಲಿ ಸುಮಾರು 954 ಎಕರೆ ಜಾಗ ಕೆಪಿಸಿಎಲ್ ಕಂಪೆನಿಗೆ ಸೇರಿದೆ. ಕೆಪಿಸಿಎಲ್ ಅಷ್ಟೇ ಜಾಗ ಕೊಡಲು ಕೋರಿದೆ. ಈಗ ಕೆಪಿಸಿಎಲ್‍ಗೆ ಅಷ್ಟು ಜಾಗ ಕೊಡುವ ಕೆಲಸವನ್ನು ಕರ್ನಾಟಕ ಸರಕಾರ ಆರಂಭಿಸಿಲ್ಲ ಎಂದು ಹೇಳಿದರು.

ಜೆಎಸ್‍ಡಬ್ಲ್ಯೂ ಕಂಪೆನಿ ಜೊತೆ ಏನು ಒಳ ಒಪ್ಪಂದ ಆಗಿದೆ? ಎಂದು ಅವರು ಕೇಳಿದರು. ಸರಕಾರದ ಕೋಟ್ಯಂತರ ರೂಪಾಯಿಯ ಆಸ್ತಿಯನ್ನು ಕೇವಲ 20 ಕೋಟಿಗೆ ಜೆಎಸ್‍ಡಬ್ಲ್ಯೂ ಕಂಪೆನಿಗೆ ಕೊಡುತ್ತಿದ್ದಾರೆ. ಇದರ ಹಿಂದೆ ಬಹಳ ದೊಡ್ಡ ಗೋಲ್‍ಮಾಲ್ ಇದೆ ಎಂದು ಆರೋಪಿಸಿದರು.
 
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ